ನವದೆಹಲಿ: ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ 2017-18 ರಿಂದ ಕರ್ನಾಟಕಕ್ಕೆ 1,87,867 ಕೋಟಿ ರೂ.ಗಳ ನಷ್ಟವಾಗಿದ್ದು ಇದರಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಅವಕಾಶವನ್ನು ತಪ್ಪಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ಎಸಗಿರುವ ಆರ್ಥಿಕ ದೌರ್ಜನ್ಯದ ಕೇಂದ್ರ ದ ವಿರುದ್ಧ ಜಂತರ್ ಮಂತರ್ ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಹಂಚಿಕೆಯಲ್ಲಿ ಇಳಿಕೆ, ಮೂಲಸೌಕರ್ಯ ಬದ್ಧತೆಗಳ ಈಡೇರಿಕೆಯಲ್ಲಿ ಮತ್ತು ಕೇಂದ್ರ ಸರ್ಕಾರದಿಂದ ವಿಪತ್ತು ನಿರ್ವಹಣೆಗೆ ಅನುದಾನ ಬಿಡುಗಡೆಯಲ್ಲಿನ ವಿಳಂಬದ ಕುರಿತು ಸವಿಸ್ತಾರವಾಗಿ ಮಾತನಾಡಿದ ಅವರು, ಇದು ಕನ್ನಡಿಗರ ಅಸ್ಮಿತೆಯ ಮೇಲಾಗುತ್ತಿರುವ ವ್ಯವಸ್ಥಿತ ದಾಳಿ ಎಂದು ವ್ಯಾಖ್ಯಾನಿಸಿದರು. ಕೇಂದ್ರದ ನಿರ್ಲಕ್ಷ್ಯದಿಂದ ಕನ್ನಡಿಗರಿಗೆ ತೊಂದರೆಯುಂಟಾಗುತ್ತಿರುವುದು ಗಾಬರಿ ಹುಟ್ಟಿಸುವಂತಿದೆ.
ಕನ್ನಡಿಗರ ಹಿತಾಸಕ್ತಿಯನ್ನು ಕೇಂದ್ರ ಬಿಜೆಪಿ ನಾಯಕರು ದುರ್ಬಲಗೊಳಿಸುತ್ತಿದ್ದಾರೆ. ಸಂವಿಧಾನದೆಡೆಗೆ ಹಾಗೂ ಮತ್ತು ಸಹಕಾರಿ ಒಕ್ಕೂಟದೆಡೆಗೆ ಅವರ ಬದ್ಧತೆ ಇಲ್ಲವಾಗಿದೆ ಎಂದರು.
ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಶೇ 4.71 ರಿಂದ 3.64% ಗೆ ಇಳಿಕೆ
ಕೇಂದ್ರ ತೆರಿಗೆಯಲ್ಲಿ ಕರ್ನಾಟಕ ರಾಜ್ಯದ ಪಾಲಿನಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಸುದೀರ್ಘವಾಗಿ ವಿವರಿಸಿದ ಮುಖ್ಯಮಂತ್ರಿಗಳು, 14 ನೇ ಹಣಕಾಸು ಆಯೋಗದಿಂದ 4.71% ರಿಂದ 15 ನೇ ಹಣಕಾಸು ಆಯೋಗದಲ್ಲಿ 3,64% ಗೆ ಇಳಿಕೆಯಾಗಿರುವುದು ಕಳೆದ 5 ವರ್ಷಗಳಲ್ಲಿ ಅಂದಾಜು ರೂ.62,098 ಕೋಟಿಗಳಷ್ಟು ನಷ್ಟವಾಗಲು ಕಾರಣವಾಗಿದೆ. ವರದಾನವೆಂದೇ ಬಣ್ಣಿಸಲಾದ ಜಿ.ಎಸ್.ಟಿ ಅನುಷ್ಠಾನವು ಜೂನ್ 2022 ರಲ್ಲಿ ನಿಲ್ಲಿಸಲಾದ ಪರಿಹಾರದಿಂದಾಗಿ ಶಾಪವಾಗಿ ಪರಿಣಮಿಸಿದೆ. ಈ ಹಠಾತ್ ನಿಲುಗಡೆಯಿಂದ ನಮ್ಮ ಹಣಕಾಸು ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ನಾವು ಹೆಮ್ಮೆಯಿಂದ ನಿರ್ವಹಿಸುತ್ತಿದ್ದ ಶೇ 15% ಬೆಳವಣಿಗೆ ದರವನ್ನು ನಿರ್ವಹಿಸುವುದನ್ನು ಕಷ್ಟಕರವಾಗಿದೆ. ಜಿ.ಎಸ್.ಟಿ ಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕ 59,274 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದರು.
ಜಿ.ಎಸ್.ಟಿ ಪರಿಹಾರದ ಕುರಿತು ಮಾಹಿತಿ ಕೋರಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಮೂರು ಪತ್ರಗಳನ್ನು ರಾಜ್ಯ ಸರ್ಕಾರ ಬರೆದಿದೆ. ಆದರೆ ದುರದೃಷ್ಟವಶಾತ್ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಪ್ರತಿ ವರ್ಷ 4,30,000 ಕೋಟಿ ರೂ.ಗಳ ತೆರಿಗೆ ರಾಜಸ್ವವನ್ನು ಸಂದಾಯ ಮಾಡುತ್ತಿದ್ದರೂ, ಕೇಂದ್ರ ಸರ್ಕಾರದಿಂದ ರೂ. 50,000 ಕೋಟಿ ರೂ.ಗಳನ್ನು ಮಾತ್ರ ಪಡೆಯುತ್ತಿದ್ದೇವೆ ಎಂದು ಹೇಳಿದರು.
ದುರದೃಷ್ಟವಶಾತ್ , ಕರ್ನಾಟಕ ನೀಡುವ ಪ್ರತಿ 100 ರೂ.ಗಳಿಗೆ ಕೇವಲ 12-1 3 ರೂ.ಗಳನ್ನು ಮಾತ್ರ ಪಡೆಯುತ್ತಿದೆ.ಈ ಅಸಮಾನ ಹಂಚಿಕೆಯಿಂದಾಗಿ ನಮ್ಮ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ನಾವೇ ಅನುದಾನ ಹೊಂದಿಸಿಕೊಳ್ಳಲು ನೇರ ಹೊಡೆತ ಕೊಟ್ಟಂತಾಗಿದೆ ಎಂದರು. ಕೇಂದ್ರ ಸರ್ಕಾರದ ಆಯವ್ಯಯವು ಕಳೆದ 5 ವರ್ಷಗಳಲ್ಲಿ ದುಪ್ಪಟ್ಟಾಗಿದ್ದರೂ ಕರ್ನಾಟಕದ ಹಂಚಿಕೆ ಮಾತ್ರ ಅರ್ಧದಷ್ಟಾಗಿದೆ. 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ 24, 42,213 ಕೋಟಿ ರೂ.ಗಳಾಗಿದ್ದರೆ , ಕರ್ನಾಟಕಕ್ಕೆ 46,288 ಕೋಟಿ ರೂ.ಗಳ ಒಟ್ಟು ಅನುದಾನ ದೊರಕಿತು. 2023-24 ರಲ್ಲಿ ಕೇಂದ್ರ ಬಜೆಟ್ 45,03,097 ಕೋಟಿಗಳಷ್ಟಾದರೂ ಕರ್ನಾಟಕಕ್ಕೆ ಮಾತ್ರ 50, 257 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ನ್ಯಾಯ ಎಲ್ಲಿದೆ ? ನ್ಯಾಯವಾಗಿ ನಮಗೆ ಒಂದು ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತ ಬರಬೇಕಿದ್ದು , ಆದರೆ ಅದರ ಅರ್ಧದಷ್ಟು ಮಾತ್ರ ದೊರೆತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನುದಾನ ನಿರಾಕರಿಸಲು ಸೆಸ್ ಮತ್ತು ಸರ್ಚಾರ್ಜ್ ಗಳ ದಾರಿಯನ್ನು ಕಂಡುಕೊಂಡಿದೆ. ಈ ಹೆಚ್ಚುವರಿ ಸೆಸ್ ಮತ್ತು ಸರ್ಚಾರ್ಜ್ ಗಳಿಂದ 2017-18 ರಿಂದ ಕರ್ನಾಟಕ 55,000 ಕೋಟಿ ರೂ.ಗಳನ್ನು ಕಳೆದುಕೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಹೇಳುವಂತೆ ಹಣಕಾಸು ಆಯೋಗಗಳು ನಿಜಕ್ಕೂ ಸ್ವತಂತ್ರವಾಗಿವೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಅಂತೆಯೇ ಹಣಕಾಸು ಆಯೋಗ ಈ ಕಡಿತವನ್ನು ಸರಿದೂಗಿಸಲು ಶಿಫಾರಸ್ಸು ಮಾಡಿದ್ದ 5495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ಏಕೆ ತಿರಸ್ಕರಿಸಿತು ಎಂದೂ ಪ್ರಶ್ನಿಸಿದರು. ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ಗಾಗಿ 3000 ಕೋಟಿ ರೂ ಹಾಗೂ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗಾಗಿ ನೀಡಿದ್ದ ವಿಶೇಷ ಅನುದಾನವನ್ನು ಸಹ ಏಕೆ ತಿರಸ್ಕರಿಸಲಾಯಿತು ಎಂದರು. ಒಟ್ಟಾರೆಯಾಗಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ 11,495 ಕೋಟಿ ರೂ.ಗಳ ಅನುದಾನವನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿದೆ ಎಂದರು.