ಬೆಂಗಳೂರು: ಪಂಚಾಯತ್ ನೌಕರರು ತಮಗಾಗುತ್ತಿರುವ ಶೋಷಣೆ ಮತ್ತು ಸಮಸ್ಯೆಗಳ ವಿರುದ್ದ ಜನರ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಚೇರಿಯಲ್ಲಿ ಕಪ್ಪು ಪಟ್ಟಿ ಧರಿಸಿ ಇಲಾಖೆಯಿಂದ ಬೇಡಿಕೆ ಈಡೇರುವವರೆಗೂ ಮಾ.1ರಿಂದ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ ತಿಳಿಸಿದ್ದಾರೆ.
ಈ ಸಂಬಂಧ ಪ್ರಕಟನೆ ನೀಡಿರುವ ಅವರು, ರಾಜ್ಯದ ಗ್ರಾ.ಪಂ. ಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಸಿಬ್ಬಂದಿ ಹಲವು ವರ್ಷಗಳಿಂದ ಸಂಘಟನೆಯ ಮೂಲಕ ಇಲಾಖೆಗೆ ಹಲವು ಬೇಡಿಕೆಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಆದರೆ ಇಲಾಖೆಯು ನೌಕರರ ಮೂಲ ಬೇಡಿಕೆಗಳಾದ ‘ಸಿ ಮತ್ತು ಡಿ’ ದರ್ಜೆಯ ವೇತನ ಶ್ರೇಣಿ, ಆರೋಗ್ಯ ಭದ್ರತೆ, ಅನುಮೋದನೆ ಆಗದಿರುವ ಬಿಲ್ ಕಲೆಕ್ಟರ್, ಕ್ಲರ್ಕ್ ಕಮ್ ಡಿಇಒ, ವಾಟರ್ ಮ್ಯಾನ್, ಶುಚಿತ್ವ ನೌಕರ, ಅಟೆಂಡರ್ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ, ಡಾಟಾ ಎಂಟ್ರಿ ಆಪರೇಟರ್ಗಳ ಅನುಮೋದನೆ ಸಮಸ್ಯೆ, ಸಕಾಲ ಮುಂಬಡ್ತಿ, ನಿವೃತ್ತಿಯಲ್ಲಿ ಆರ್ಥಿಕ ಭದ್ರತೆಗಳನ್ನು ಈಡೇರಿಸದೆ ನೌಕರರನ್ನು ಹಗಲಿರುಳು ದುಡಿಸಿಕೊಳ್ಳುತ್ತಿದ್ದು, ನೌಕರರು ಶೋಷಣೆಗೊಳಗಾಗುತ್ತಿದ್ದಾರೆ. ಅಲ್ಲದೇ ಆರೋಗ್ಯ ಭದ್ರತೆ ಇಲ್ಲದೆ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದ್ದಾರೆ.
ನೌಕರರ ಬೇಡಿಕೆಗಳು: ಗ್ರಾ.ಪಂ.ನೌಕರರಿಗೆ ಕನಿಷ್ಠ ವೇತನ ಬದಲು ಗ್ರಾಮೀಣಾಭಿವೃದ್ಧಿ
ಇಲಾಖೆಯಡಿಯಲ್ಲಿ ಸಿ ಮತ್ತು ಡಿ ದರ್ಜೆಯ ವೇತನ ಶ್ರೇಣಿ ನಿಗದಿಪಡಿಸಬೇಕು. ಆರೋಗ್ಯ ಭದ್ರತೆ ಒದಗಿಸಬೇಕು, ನಿವೃತ್ತಿಯಾದಾಗ ಮಾಸಿಕ ನಿವೃತ್ತಿ ಉಪಧನ ಮಂಜೂರು ಮಾಡಬೇಕು. ಜಿ.ಪಂ.ಅನುಮೋದನೆಯಾಗದೆ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರಿಗೆ ಅನುಮೋದನೆ ಒದಗಿಸಬೇಕು. ಜೇಷ್ಠತಾ ಪಟ್ಟಿಯಲ್ಲಿರುವ ನೌಕರರ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಮುಂಬಡ್ತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾ1ರಿಂದ ನಿರಂತರ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ ತಿಳಿಸಿದ್ದಾರೆ