ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟುಗಳ ಹೊಂದಾಣಿಕೆಯ ವಿಚಾರದಲ್ಲಿ ಇದ್ದ ಗೊಂದಲಗಳು ಪರಿಹಾರಗೊಂಡಿದ್ದು ಕಂಗ್ರೆಸ್ 17 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಉಳಿದ 63ಕ್ಷೇತ್ರಗಳನ್ನು ಸಮಾಜವಾದಿ ಪಕ್ಷಕ್ಕೆ ನೀಡಲಾಗಿದ್ದು ಇದರಲ್ಲಿ ಕೆಲವು ಕ್ಷೇತ್ರ ಗಳಲ್ಲಿ ಈ ಮೈತ್ರಿಯೊಂದಿಗೆ ಇರುವ ಸಣ್ಣ ಪಕ್ಷಗಳು ಸ್ಪರ್ಧಿಸಲಿದೆ. “ನಾವು ಕಾಂಗ್ರೆಸ್ ಜೊತೆಗಿದ್ದೇವೆ ಮತ್ತು ಬಿಜೆಪಿಯನ್ನು ಸೋಲಿಸುವುದು ನಮ್ಮ ಮೈತ್ರಿ ಉದ್ದೇಶ” ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿರುವುದಾಗಿ ಮಾದ್ಯಮಗಳು ವರದಿ ಮಾಡಿದೆ.
ರಾಯ್ ಬರೇಲಿ-ಅಮೇತಿ ಸೇರಿ 17 ಸ್ಥಾನ
ಕಳೆದ ಜೂನ್ನಿಂದಲೂ ಉತ್ತರ ಪ್ರದೇಶದಲ್ಲಿ ಮೈತ್ರಿ ಬಗ್ಗೆ ಹಲವು ಸುತ್ತಿನ ಮಾತಿಕತೆ ನಡೆದಿತ್ತು. ಆದರೆ ಸೀಟುಗಳ ಹಂಚಿಕೆಯ ಬಗ್ಗೆ ಅಂತಿಮ ಹಂತಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಇದೀಗ ಮೊದಲ ಬಾರಿಗೆ ಎರಡೂ ಪಕ್ಷಗಳು ಮೈತ್ರಿ ಬಗ್ಗೆ ಬಹಿರಂಗ ಹೇಳಿಕೆ ನೀಡಿವೆ. ಕಾಂಗ್ರೆಸ್ ತನ್ನ ಹಿಂದಿನ ಭದ್ರಕೋಟೆಗಳಾಗಿದ್ದ ರಾಯ್ಬರೇಲಿ ಮತ್ತು ಅಮೇಥಿ ಜೊತೆಗೆ ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್ಪುರ್, ಪ್ರಯಾಗ್ ರಾಜ್, ಮಹಾರಾಜ್ಗಂಜ್, ಅಮ್ರೋಹಾ, ಝಾನ್ಸಿ, ಬುಲಂದ್ಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್, ಬಾರಾಬಂಕಿ ಮತ್ತು ಡಿಯೋರಿಯಾಗಳನ್ನು ಪಡೆದಿದೆ. ಮೋದಿ ಪ್ರತಿನಿದಿಸುವ ವಾರಣಾಸಿಯನ್ನು ಹೆಚ್ಚುವರಿಯಾಗಿ ಕಾಂಗ್ರೆಸ್ಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಖಿಲೇಶ್ ಯಾದವ್-ಪ್ರಿಯಾಂಕ ಮಾತುಕತೆ
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ನಡುವೆ ನಡೆಯುತ್ತಿರುವ ಬಿಕ್ಕಟ್ಟು ಬುಧವಾರ ಕೊನೆಗೊಂಡಿದ್ದು, ಸೀಟು ಹಂಚಿಕೆ ಕುರಿತು ಉಭಯ ಪಕ್ಷಗಳ ನಡುವೆ ಬಹುತೇಕ ಒಪ್ಪಂದಕ್ಕೆ ಬರಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ನಂತರ ಉಭಯ ಪಕ್ಷಗಳ ನಡುವೆ ಈ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿದ ಬಂದಿದೆ.
ಮೈತ್ರಿ ಕೂಟದಿಂದ ಹೊರಗುಳಿದ ಬಿ.ಎಸ್.ಪಿ
ದೆಶದ ರಾಜಕೀಯದ ದಿಕ್ಕು ದೆಸೆಗಳನ್ನು ನಿರ್ಧರಿಸಲಿರುವ ಉತ್ತರಪ್ರದೇಶದಲ್ಲಿ ಎಸ್.ಪಿ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆಯ ಮಾತುಕತೆ ಕೊನೆಗೂ ಯಶಸ್ವಿಯಾಗಿದೆ ಆದರೆ ಉತ್ತರಪ್ರದೇಶದಲ್ಲಿ ಇನ್ನೂ ತನ್ನದೇ ಆದ ಪ್ರಭಾವ ಹೊಂದಿರುವ ಬಿ.ಎಸ್.ಪಿ ತಾನು ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಥಿಸುವುದಾಗಿ ಪ್ರಕಟಿಸಿದೆ. ಇದು ಉತ್ತರಪ್ರದೇಶದ ರಾಜಕೀಯದಲ್ಲಿ ಅತ್ಯಂತ ಮಹತ್ವದ ವಿಚಾರವಾಗಿದೆ. ಸೋಲು ಗೆಲುವುಗಳನ್ನು ನಿರ್ಧರಿಸುವಲ್ಲಿ ಬಿ.ಎಸ್.ಪಿ ಪಕ್ಷ ನಿರ್ಣಾಯಕವಾಗಲಿದೆ.