

ಬೆಳ್ತಂಗಡಿ; ಬ್ರಾಹ್ಮಣರ ಮೇಲೆ ರಾಜ್ಯದಲ್ಲಿ ಆಗುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಬ್ರಾಹ್ಮಣ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ತಾಲೂಕಿನ ಬ್ರಾಹ್ಮಣ ಸಮುದಾಯದವರು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಇತ್ತೀಚೆಗೆ ನಡೆದ ಸಿ.ಇ.ಟಿ ಪರೀಕ್ಷೆಯಲ್ಲಿ ಸರಕಾರದ ಆದೇಶ ಇಲ್ಲದಿದ್ದರೂ ಪವಿತ್ರವಾದ ಜನಿವಾರವನ್ನು ತುಂಡರಿಸಿ ಅದನ್ನು ಪರಿಕ್ಷಾ ಪ್ರವೇಶಕ್ಕೆ ನಿರ್ಬಂಧವಾಗಿ ಪರಿಗಣಿಸಿ ದೇಹದಿಂದ ತೆಗೆದಿರುವ ಅಧಿಕಾರಿಗಳ ಕ್ರಮವನ್ನು ವಿಪ್ರಸಮಾಜವು ತೀವ್ರವಾಗಿ ಖಾಂಡಿಸುತ್ತದೆ. ಈರೀತಿಯ ವರ್ತನೆಗಳು ಸಮಾಜದಲ್ಲಿ ವಿಘಟನೆಯನ್ನು ಉಂಟುಮಾಡುವ ಮತ್ತು ಒಟ್ಟು ಹಿಂದೂ ಸಮಾಜದಲ್ಲಿ ಸಂಘರ್ಷವನ್ನು ಉಂಟುಮಾಡುವ ಹುನ್ನಾರವಾಗಿರುತ್ತದೆ. ಸಮಾಜ ವಿಘಟನಾ ಕೃತ್ಯವನ್ನು ವಿಪ್ರ ಸಮಾಜವು ಖಂಡಿಸುತ್ತದೆ.
ಬ್ರಾಹ್ಮಣರ ಸಮಾಜದ ಆಚಾರ ನಿಷ್ಠೆಗೆ ದಕ್ಕೆಯಾಗುವಂತಹ ಯಾವುದೇ ರೀತಿಯ ವಿದ್ಯಾಮಾನಗಳನ್ನು ಸಮಾಜವು ತೀವ್ರವಾಗಿ ಖಂಡಿಸುತ್ತದೆ, ರಾಜ್ಯದ ಮಾನ್ಯ ಮುಖ್ಯಮಂತ್ರಿ ಗಳಾದ ತಾವು ರಾಜ್ಯದಲ್ಲಿ ಇಂತಹ ಹೇಯ ಕೃತ್ಯಗಳು ಮುಂದೆ ನಡೆಯದಂತೆ ಎಚ್ವರಿಕೆ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವಿವಿಧ ಬ್ರಾಹ್ಮಣ ಸಂಘಟನೆಗಳ ಮುಖಂಡರುಗಳಾದ ಶರತ್ ಕೃಷ್ಣ ಪಡುವೆಟ್ನಾಯ ಬಿ.ಕೆ ಧನಂಜಯರಾವ್, ರಾಘವೇಂದ್ರ ಬೈಪಡುತ್ತಾಯ, ತ್ರಿವಿಕ್ರಮ ಹೆಬ್ಬರ್, ವಿಶ್ವನಾಥ ಹೊಳ್ಳ, ಶಿವಾನಂದ ರಾವ್, ವಿಷ್ಣು ಭಟ್, ಮಹೇಶ್ ಭಟ್, ಶ್ರೀನಿವಾಸ ಧರ್ಮಸ್ಥಳ ಹಾಗೂ ಇತರರು ಇದ್ದರು.


