

ಬೆಳ್ತಂಗಡಿ; ಬೀಡಿ ಕಾರ್ಮಿಕರ ವೇತನ ಈಗಿರುವ ವೇತನ ರೂ 315 ಕ್ಕಿಂತ ಕಡಿಮೆಗೆ ಅಂದರೆ ರೂ.270 ಕ್ಕೆ ನಿಗದಿಗೊಳಿಸಿ ಕನಿಷ್ಟ ವೇತನ ಜಾರಿ ಮಾಡಿ ಆದೇಶ ಮಾಡಿದ ರಾಜ್ಯ ಸರಕಾರದ ಕಾರ್ಮಿಕ ದ್ರೋಹಿ ನಡೆಯನ್ನು ಖಂಡಿಸಿ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ ಸಿಐಟಿಯು ನೇತೃತ್ವದಲ್ಲಿ ನಡೆದ ಬೀಡಿ ಕಾರ್ಮಿಕರ ಆಕ್ರೋಶ ಪ್ರತಿಭಟನೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ನಡೆಯಿತು
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಬಿ.ಎಂ ಭಟ್ ಬೆಲೆಏರಿಕೆಯ ಪ್ರತಿ ಅಂಶಕ್ಕೆ 4 ಪೈಸೆ ಇದ್ದ ಡಿ.ಎ. ಯನ್ನು 3 ಪೈಸೆಗೆ ಇಳಿಸಿ ಬೀಡಿ ಕಾರ್ಮಿಕರ ಪಾಲಿಗೆ ಯಾವುದೇ ಅಗತ್ಯವಸ್ತುಗಳಿಗೆ ಬೆಲೆಏರಿಕೆ ಆಗಿಲ್ಲ, ಬೆಲೆಇಳಿಕೆ ಆಗಿದೆ ಎಂದು ಹೇಳಿ ವೇತನ ಆದೇಶ ಮಾಡುವುದು ಜನವಿರೋದಿ ಆಡಳಿತವಾಗಿದೆ. ಅವಿಭಜಿತ ದ.ಕ. ಜಿಲ್ಲೆ ಆರ್ಥಿಕವಾಗಿ ಬಲಿಷ್ಟವಾಗಿ ಬೆಳೆದು ಬರಲು ಬೀಡಿ ಉದ್ಯಮ ಮತ್ತು ಅಡಿಕೆ ಕೃಷಿ ಪ್ರಧಾನ ಕಾರಣವಾಗಿದ್ದರೂ ಇವೆರಡನ್ನೂ ಮುಗಿಸಲು ಇಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಪೈಪೋಟಿ ನಡೆಸುತ್ತಿವೆ ಎಂದು ಟೀಕಸಿದರು. 2018ರ ಕನಿಷ್ಟ ಕೂಲಿ ಕಾಯ್ಕೆಯನ್ನು 7 ವರ್ಷಗಳ ಬಳಿಕ ಹಿಂಪಡೆದು ನಿಗದಿಯಾಗಿದ್ದ 210 ರೂ ವೇತನವನ್ನು 180 ಕ್ಕೆ ಇಳಿಸಿ ಇನ್ನೊಂದು ಮರು ಆದೇಶ ಮಾಡಿರುವುದು ಕೂಡಾ ಕನಿಷ್ಟ ವೇತನ ಕಾಯ್ದೆಯ ಸ್ಪಷ್ಟ ಉಲ್ಲಂನೆಯಾಗಿದೆ. ಒಂದೆಡೆ ಕೇಂದ್ರ ಸರಕಾರ ಜಿ.ಎಸ್.ಟಿ. ಹೆಸರಲ್ಲಿ ವಸೂಲಿ ಮಾಡುವ ಬೀಡಿ ಕಾರ್ಮಿಕರ ಸೆಸ್ ಹಣವನ್ನು ಇನ್ನೂ ಮಂಡಳಿಗೆ ನೀಡದೆ ಬೀಡಿ ಕಾರ್ಮಿಕರ ಆರೋಗ್ಯ, ಮನೆದ ಸಹಾಯಗಳು, ಬೀಡಿ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಸಿಗದಂತೆ ಮಾಡಿದೆ. ಈ ಕಾರ್ಮಿಕ ದ್ರೋಹಿ ಆದೇಶ ಹಿಂಪಡೆದು ನ್ಯಾಯ ಒದಗಿಸದಿದ್ದಲ್ಲಿ ಬೀಡಿ ಕಾರ್ಮಿಕರ ನ್ಯಾಯಕ್ಕಾಗಿ ನಿರ್ಣಾಯಕ ಹೋರಾಟ ನಡೆಸಲು ಸಿಐಟಿಯು ಎಂದಿಗೂ ಬದ್ದವಾಗಿದೆ ಎಂದವರು ಸರಕಾರವನ್ನು ಎಚ್ಚರಿಸಿದರು.
ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಈಶ್ವರಿ ಶಂಕರ್ ಮಾತನಾಡಿ ಹೋರಾಟದ ಅಗತ್ಯ ವಿವರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿದರು ಸಂಘದ ಉಪಾಧ್ಯಕ್ಷೆ ಪುಷ್ಪಾ ವಂದಿಸಿದರು. ಹೋರಾಟದ ನೇತೃತ್ವದಲ್ಲಿ ಸಿಪಿಐಎಂ ತಾಲೂಕು ಸಮಿತಿ ಸದಸ್ಯರಾದ ಲೋಕೇಶ್ ಕುದ್ಯಾಡಿ, ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್, ಮಹಿಳಾ ಸಂಘದ ಕುಮಾರಿ, ಕಾರ್ಮಿಕ ಮುಖಂಡರುಗಳಾದ ನೀತಾ, ಅಶ್ವಿತ, ಕುಸುಮ ಕೇಳ್ತಾಜೆ, ರಾಮಚಂದ್ರ, ರೈತ ಮುಖಂಡರುಗಳಾದ ವಿಶ್ವನಾಥ, ನೀಲೇಶ್ ಪೆರಿಂಜೆ, ಮೊದಲಾದವರು ಉಪಸ್ತಿತರಿದ್ದರು.

