ಬೆಳ್ತಂಗಡಿ; ನಕ್ಸಲ್ ನಾಯಕ ವಿಕ್ರಮ್ ಗೌಡ ನಕ್ಸಲ್ ನಿಗ್ರಹ ದಳದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ ಘಟನೆ ಸಂಶಯವನ್ನು ಹುಟ್ಟುಹಾಕಿದ್ದು , ರಾಜ್ಯ ಸರ್ಕಾರ ತಕ್ಷಣ ಈ ಎನ್ ಕೌಂಟರ್ ನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು.
ಎಂದು ಹೋರಾಟಗಾರ ಶೇಖರ ಲಾಯಿಲ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 21 ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಈದುವಿನಲ್ಲಿ ನಡೆದ ಎನ್ ಕೌಂಟರ್ ಬಳಿಕ ಹತ್ತಾರು ನಕ್ಸಲ್ ಎನ್ ಕೌಂಟರ್ ನಡೆದಿದೆ. ಯಾವುದೇ ಎನ್ ಕೌಂಟರ್ ನಡೆಸುವ ಮೊದಲು ಯಾವುದೇ ಮನೆಯನ್ನು ತೆರವು ಮಾಡಿದ ಇತಿಹಾಸವಿಲ್ಲ. ಆದರೆ ವಿಕ್ರಮ್ ಗೌಡ ಎನ್ ಕೌಂಟರ್ ನಲ್ಲಿ ಮಾತ್ರ ಎನ್ ಕೌಂಟರ್ ಮೊದಲು ಸ್ಥಳೀಯ ಮನೆಯವರನ್ನು ತೆರವು ಮಾಡಿದ ಎರಡು ದಿನಗಳ ನಂತರ ಎನ್ ಕೌಂಟರ್ ನಡೆಸಿದ ಘಟನೆ ಸಂಶಯಕ್ಕೆ ಕಾರಣವಾಗಿದೆ. ಎನ್ ಕೌಂಟರ್ ನಡೆದ ಸ್ಥಳಕ್ಕೆ ಪತ್ರಿಕೆ , ಟಿವಿ ಮಾದ್ಯಮದವರನ್ನು ಪ್ರವೇಶ ನೀಡದೆ , ಶವವನ್ನು ನೋಡಲು ಬಿಡದೆ ನಕ್ಸಲ್ ನಿಗ್ರಹ ದಳ ಅಸಂವಿಧಾನಿಕವಾಗಿ ನಡೆದುಕೊಂಡಿದೆ. ಮನೆಯೊಂದರಲ್ಲಿ ಎನ್ ಕೌಂಟರ್ ನಡೆದಿದೆ ಎನ್ನುವ ಪೋಲಿಸ್ ಇಲಾಖೆಯ ಹೇಳಿಕೆ ಇನ್ನೊಂದು ರೀತಿಯಲ್ಲಿ ಸಂಶಯಕ್ಕೆ ಕಾರಣವಾಗಿದೆ. ನಕ್ಸಲರು ನಡೆಸಿದ ಪ್ರತಿದಾಳಿಯಲ್ಲಿ ಪೋಲಿಸರಿಗೆ ಗಾಯವಾಗಿಲ್ಲ. ನಕ್ಸಲರ ಪ್ರತಿದಾಳಿಯ ಗುಂಡು ಯಾವುದಕ್ಕೆ ತಗುಲಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎನ್ ಕೌಂಟರ್ ನಡೆಯುವ ಮೊದಲು ಕೇಂದ್ರ ಸಶಸ್ತ್ರ ಪಡೆಗಳನ್ನು ಕರೆಸಿಕೊಂಡಿದ್ದು ಏಕೆ ? ರಾಜ್ಯದ ನಕ್ಸಲ್ ನಿಗ್ರಹ ದಳ ಅಷ್ಟು ಕೆಟ್ಟು ಹೋಗಿದೆಯೇ ? ಎನ್ ಕೌಂಟರ್ ನಡೆಸಿದ್ದು ನಕ್ಸಲ್ ನಿಗ್ರಹ ದಳವೋ ಅಥವಾ ಕೇಂದ್ರ ಸಶಸ್ತ್ರ ಪಡೆಯೋ ಎಂಬ ಅನುಮಾನದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಬೇಕು. ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ