ಬೆಳ್ತಂಗಡಿ : ‘ಸಮಾಜದಲ್ಲಿ ರಾಜಕಾರಣಕ್ಕೆ ತನ್ನದೇ ಆದ ಮಹತ್ವ ಮತ್ತು ಗೌರವಗಳಿವೆ. ಯುವಕರು ಹೆಚ್ಚಾಗಿ ರಾಜಕೀಯಕ್ಕೆ ಬರುವ ಕಾರ್ಯವನ್ನು ಮಾಡಬೇಕು, ರಾಜಕೀಯ ವ್ಯಕ್ತಿಗಳ ತೀರ್ಮಾನಗಳು ಇಡೀ ಸಮಾಜದ ಮೇಲೆ ಪರಿಣಾಮ ಬೀರುವುದರಿಂದ ರಾಜಕಾರಣಿ ಸರಿಯಾಗಿ ವಿಚಾರ ಮಂಡನೆ ಮಾಡಿದರೆ ಸಮಾಜಕ್ಕೆ ಪ್ರಯೋಜನವಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.
ಅವರು ಭಾನುವಾರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ನಲ್ಲಿ ಸಂಯುಕ್ತ ಕ್ರೈಸ್ತ ಸಂಘಟನೆಗಳ ವತಿಯಿಂದ ದ್ವಿತೀಯ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದುದಕ್ಕಾಗಿ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಗಾರದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸಮಾಜದ ಕಣ್ಣೀರು ಒರೆಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಹಾಗಾಗಿ ಎಲ್ಲಾ ಧರ್ಮಗಳಲ್ಲಿಯೂ ರಾಜಕೀಯಕ್ಕೆ ಹೆಚ್ಚು ಜನ ಬರಬೇಕು. ಸಾಮಾಜಿಕ ಹಿತದ ಜತೆ ನನ್ನ ಸಮಾಜಕ್ಕೆ ತೊಂದರೆಯಾದರೆ ಧ್ವನಿ ಎತ್ತುವುದೂ ನಮ್ಮ ಕರ್ತವ್ಯವಾಗಿದೆ ಅದನ್ನು ನಿರಂತರ ಮಾಡುತ್ತಾ ಬಂದಿದ್ದೇನೆ ಎಂದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರಾದ ಅ.ವಂ ಬಿಷಪ್ ಲಾರೆನ್ಸ್ ಮುಕ್ಕುಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಈ ಕಾರ್ಯಕ್ರಮದಿಂದಾಗಿ ಕ್ರೈಸ್ತ ಸಮುದಾಯದ ಮಧ್ಯೆ ಒಗ್ಗಟ್ಟು ಜಾಸ್ತಿಯಾಗಿದೆ. ಸಮುದಾಯದ ಹಿತ ಕಾಪಾಡಲು ಇದು ಪ್ರೇರಣೆಯಾಗಿದೆ. ಐವನ್ ಡಿಸೋಜಾರವರು ರಾಜಕೀಯವಾಗಿ ಶ್ರೇಷ್ಠ ಸ್ಥಾನದಲ್ಲಿರುವುದು ಸಮುದಾಯಕ್ಕೆ ಗೌರವ’ ಎಂದರು.
ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಕಥೋಲಿಕ ಸಭಾ ಬೆಳ್ತಂಗಡಿ ವಲಯದ ಆಧ್ಯಾತ್ಮಿಕ ನಿರ್ದೇಶಕ ಫಾ. ವಾಲ್ಟರ್ ಡಿಮೆಲ್ಲೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
‘ ಐವನ್ ಡಿಸೋಜಾರವರು ಧೈರ್ಯವಂತ ರಾಜಕಾರಣಿಯಾಗಿದ್ದಾರೆ. ಹೋರಾಟದ ಮೂಲಕವಾಗಿಯೇ ನಾಯಕರಾಗಿ ಮೂಡಿ ಬಂದವರು. ಕ್ರೈಸ್ತ ಸಮಾಜದ ಜತೆ ಎಲ್ಲಾ ಸಮಾಜಕ್ಕೂ ಅವರ ಸೇವೆ ದೊರಕಲಿ ಎಂದು ಶುಭ ಹಾರೈಸಿದರು.
ಕ್ರೈಸ್ತ ಸಮುದಾಯದ ಈಗಿನ ಸವಾಲುಗಳು ಹಾಗೂ ಸಂಘಟನೆಯ ಪ್ರಾಮುಖ್ಯತೆ ಎಂಬ ವಿಚಾರದಲ್ಲಿ ನಿವೃತ್ತ ಪ್ರಾಂಶುಪಾಲ ಟಿ.ಪಿ.ಅಂತೋನಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಎಲ್.ಪಿ.ಸಿ.ಚರ್ಚ್ ನ ಕಾರ್ಯದರ್ಶಿ ಕೆ.ಪಿ.ಜೋಸೆಪ್, ಚ.ಪಾ.ಪ. ಬೆಳ್ತಂಗಡಿ ವಲಯದ ಕಾರ್ಯದರ್ಶಿ ಜೆರಾಲ್ಡ್ ಮೋರಾಸ್ , ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಸ್ತ್ರೀ ಹಿತ ಸಂಚಾಲಕಿ ಐರಿನ್ ಸಿಕ್ಕೇರಾ , ನ್ಯೂ ಲೈಫ್ ಫೆಲೋಶಿಪ್ ಮಡಂತ್ಯಾರಿನ ಪಾಸ್ಟಾರ್ ಅಂತೋನಿ ರೊಡ್ರಿಗಸ್, ಕೆ ಎಸ್.ಎಂ.ಸಿ.ಎ. ಬೆಳ್ತಂಗಡಿ ವಲಯದ ಅಧ್ಯಕ್ಷ ರೆಜಿ ಜಾರ್ಜ್, ಕಥೊಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯಾಧ್ಯಕ್ಷೆ ಗ್ರೇಸಿ ಲೋಬೋ, ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಕಾರ್ಯದರ್ಶಿ ಪಿಲಿಪ್ ಡಿಕುನ್ಹ, ರಾಜಕೀಯ ಸಂಚಾಲಕ ವಿನ್ಸೆಂಟ್ ಡಿಸೋಜಾ, ಕೆ.ಎಸ್.ಎಂ.ಸಿ.ಎ. (ರಿ.) ತೋಟತ್ತಾಡಿ ವಲಯಾಧ್ಯಕ್ಷ ಟೊಮಿ ವೈಪನ, ಐಸಿವೈಯಂ, ಬೆಳ್ತಂಗಡಿ ವಲಯಾಧ್ಯಕ್ಷ ಸುಪ್ರಿತ್ ಫೆರ್ನಾಂಡಿಸ್, ಕೆ ಎಸ್.ಎಂ. ಸಿ.ಎ. ಕೇಂದ್ರ ಸಮಿತಿ ಕಾರ್ಯದರ್ಶಿ ಸಭಾಸ್ಟಿಯನ್ ಮಲಯಾಟಿಲ್, ಮಾತೃ ವೇದಿ ಅಧ್ಯಕ್ಷೆ ಮೆರಸಿ ಚಾಕೋ ಕಾಡಶೆರಿಲ್, ಕೆ.ಎಸ್.ಎಂ.ಸಿ.ಎ. ಧರ್ಮಸ್ಥಳ ವಲಯಾಧ್ಯಕ್ಷ ಜೈಸನ್ ಪಟ್ಟೇರಿ ಇದ್ದರು.
ಮಡಂತ್ಯಾರು ಸೇಕ್ರೇಡ್ ಹಾರ್ಟ್ ಚರ್ಚಿನ ಧರ್ಮಗುರು ಫಾ. ಸ್ಟೇನಿ ಗೋವಿಯಸ್ ಪ್ರಾರ್ಥಿಸಿದರು. ಆಲ್ ಇಂಡಿಯನ್ ಕ್ಯಾಥೋಲಿಕ್ ಯುನಿಯನ್ ಕರ್ನಾಟಕ ರಾಜ್ಯಾಧ್ಯಕ್ಷ ಸೇವಿಯರ್ ಪಾಲೇಲಿ ಅಭಿನಂದನಾ ಪತ್ರ ವಾಚಿಸಿದರು. ಕಥೊಲಿಕ್ ಸಭಾ ಬೆಳ್ತಂಗಡಿ ವಲಯಾಧ್ಯಕ್ಷ ಲಿಯೋ ರೋಡ್ರಿಗಸ್ ಸ್ವಾಗತಿಸಿದರು. ಕೆ.ಎಸ್.ಎಂ.ಸಿ.ಎ ಇದರ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ವಂದಿಸಿದರು. ವಿನ್ಸೆಂಟ್ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.