ಮಂಗಳೂರು: ಮಂಗಳೂರು ನಗರದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ 42 ವರ್ಷದ ಮಹಿಳೆಯೊಬ್ಬರನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತೆಯನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗುರಿಂಗಾನ ಮನೆ ನಿವಾಸಿ ನಸೀಮಾ @ ನಸೀಮ (42) ಎಂದು ಗುರುತಿಸಲಾಗಿದೆ.
ನವೆಂಬರ್ 1ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ನಸೀಮಾಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪೂರೈಕೆ ಜಾಲದ ಕುರಿತು ತನಿಖೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂಪ್ವೆಲ್ನ ಉಜ್ಜೋಡಿ ಸಮೀಪದ ರಾಧಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ಮೊದಲ ಮಹಡಿಯಲ್ಲಿರುವ ಫ್ಲ್ಯಾಟ್ ಸಂಖ್ಯೆ 103ಕ್ಕೆ ದಾಳಿ ನಡೆಸಿದ ಪೊಲೀಸರು, ಸುಮಾರು ₹15.30 ಲಕ್ಷ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿತೆಯು ಮಂಗಳೂರು ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.




