ಬೆಳ್ತಂಗಡಿ: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್ ಮಂಗಳೂರು ಹಾಗೂ ಕಣಚೂರು ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗ ಮತ್ತು ಎನ್.ಇ.ಟಿ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಜೈನ್ ಪೇಟೆ ಬೆಳ್ತಂಗಡಿ ಇವರ ಸಹಕಾರದೊಂದಿಗೆ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ ಗುರುವಾಯನಕೆರೆ ಜೈನ್ ಪೇಟೆಯಲ್ಲಿರುವ ಎನ್.ಇ.ಟಿ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ, ಗಾಲಿಕುರ್ಚಿ ಹಾಗೂ ವಾಟರ್ ಬೆಡ್ ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳು ನಡೆದವು
ಬೆಳ್ತಂಗಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪುಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾದ ಉಪಾಧ್ಯಕ್ಷ ಗಿರೀಶ್ ಪೂಜಾರಿ ಮೂಡುಕೋಡಿ, ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಬೆಳ್ತಂಗಡಿ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ., ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಹರಿದಾಸ್ ಎಸ್.ಎಂ., ಗುರುವಾಯನಕೆರೆಯ ಎನ್.ಇ.ಟಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಸಜಿ ಪಿ.ಆರ್., ಕ್ರಾಂತಿವೀರ ಮಂಜ ಬೈದ್ಯ ಸಂಸ್ಕರಣ ಸಮಿತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂಪತ್ ಬಿ. ಸುವರ್ಣ, ಜ್ಯೋತಿಷಿ ಹಾಗೂ ಕಂಬಳ ಯಜಮಾನ ಗಣೇಶ್ ನಾರಾಯಣ ಪಂಡಿತ್, ಕೊಕ್ರಾಡಿ ಮಣಿಕಂಠ ಟ್ರೇಡರ್ಸ್ ಮಾಲಕ ಶುಭಕರ ಪೂಜಾರಿ ಸಾವ್ಯ , ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಇದ್ದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ರಕ್ಷಿತ್ ಶಿವರಾಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಘಟಕದ ನಿರ್ದೇಶಕ ಶೈಲೇಶ್ ಪ್ರಾರ್ಥಿಸಿದರು. ಕೇಂದ್ರ ಸಮಿತಿ ಆರೋಗ್ಯ ನಿರ್ದೇಶಕ ರಾಕೇಶ್ ಕುಮಾರ್ ಮೂಡುಕೋಡಿ ಸ್ವಾಗತಿಸಿ ಪ್ರಸ್ತಾವಿಸಿದರು. ಶಿಬಿರದ ಸಂಚಾಲಕ ಗುರುರಾಜ್ ಗುರಿಪಳ್ಳ ಸನ್ಮಾನ ಪತ್ರ ವಾಚಿಸಿದರು. ಸುಧಾಮಣಿ ರಮಾನಂದ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ವಂದಿಸಿದರು.
ಶಿಬಿರದಲ್ಲಿ 102 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರದಲ್ಲಿ 150 ಮಂದಿ ಭಾಗವಹಿಸಿ ವಿವಿಧ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡರು. ಅಗತ್ಯವಿರುವವರಿಗೆ 62 ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. 20 ಜನರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಯಿತು. ಅರ್ಹ ಫಲಾನುಭವಿಗಳಿಗೆ ಉಚಿತ ಗಾಲಿಕುರ್ಚಿ ಹಾಗೂ ವಾಟರ್ ಬೆಡ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಭಾ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ವ್ಯವಸ್ಥೆಯನ್ನು ಮಾಡಿ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಸುಲಭವಾಗಿ ಪಡೆಯಲು ಅಗತ್ಯ ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ದಾನಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ, ರಕ್ತದಾನಿಗಳು, ಫಲಾನುಭವಿಗಳು, ಸ್ವಯಂಸೇವಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಬೆಳ್ತಂಗಡಿ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.




