ಬೆಳ್ತಂಗಡಿ: ನಾವೂರು ಗ್ರಾಮದ ನಾವೂರು ಸ್ವಾತಿ ಕಟ್ಟಡದಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಆರಂಭಿಸಿದ ಬೆಳ್ತಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು. ಈ ಪ್ರಕರಣದಲ್ಲಿ ಶಂಕಿತ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಆರೋಗ್ಯ ಕ್ಲಿನಿಕ್ಗೆ ರಾತ್ರಿ ಸಮಯ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ನಾವೂರು ನಿವಾಸಿ ರವಿ ಪೂಜಾರಿಯನ್ನು ಎಂಬಾತನನ್ನು ಅ.14 ರಂದು ಸಂಜೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ನಾವೂರು ನಿವಾಸಿ ಸುರೇಶ್ ಇಂಚರ ಎಂಬಾತನನ್ನು ಅ.14ರಂದು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪುತ್ತೂರಿನ ಕೌಡಿಚಾರು ಎಂಬಲ್ಲಿದ್ದ ದಿನೇಶ್ ಪ್ರಭು ನಾವೂರು ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅ.7ರಂದು ನಾವೂರು ಪೇಟೆಯಲ್ಲಿರುವ ಸ್ವಾತಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಡಾ। ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ತಡ ರಾತ್ರಿ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಾ| ಪ್ರದೀಪ್ ಅವರ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಕುರಿತು ತಾಲೂಕಿನಾದ್ಯಂತ ನಾಗರಿಕರು ಖಂಡನೆ ವ್ಯಕ್ತಪಡಿಸಿದ್ದರು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಬೆಳ್ತಂಗಡಿ ಪೊಲೀಸರು ಕೃತ್ಯ ನಡೆದ ಒಂದು ವಾರದಲ್ಲಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಲಭ್ಯ ಮಾಹಿತಿಯಂತೆ ಪ್ರಕರಣದ ಪ್ರಮುಖ ಆರೋಪಿ ರವಿ ಪೂಜಾರಿ ಎಂಬಾತನಾಗಿದ್ದಾನೆ. ಈತ ಈ ಕೃತ್ಯವನ್ನು ಮಾಡಲು ಸುರೇಶ್ ಇಂಚರ ಹಾಗೂ ದಿನೇಶ್ ಪ್ರಭು ಎಂಬವರು ಈ ಬಗ್ಗೆ ಸಂಚು ನಡೆಸಿ ಆತನ ಮೂಲಕ ಬೆಂಕಿ ಹಚ್ಚುವಂತೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ. ಪೊಲೀಸರ ವಶದಲ್ಲಿರುವ ಇಬ್ಬರ ವಿಚಾರಣೆ ನಡೆಯುತ್ತಿದ್ದು ಇವರಿಂದ ಲಭಿಸುವ ಮಾಹಿತಿಗಳು ಪ್ರಕರಣದಲ್ಲಿ ಅತ್ಯಂತ ಮಹತ್ವದ್ದಾಗಲಿದೆ. ಬಂಧಿತ ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ನಿರೀಕ್ಷೆಯಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಬೂಮರೆಡ್ಡಿ, ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ, ಬೆಳ್ತಂಗಡಿ ಠಾಣಾ ಪೊಲೀಸರು, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಡಿವೈಎಸ್ಪಿ ರೋಹಿಣಿ ಸಿ.ಕೆ.ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ಪೊಲೀಸ್ ಉಪ ನೀರಿಕ್ಷಕರಾದ ಆನಂದ್ ಹಾಗೂ ಸಿಖಂದರ್ ಪಾಷಾ ತಂಡ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.









