ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆಯಲ್ಲಿ ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪದ ಮೇಲೆ ಪತಿ ಶಿವಲಿಂಗಪ್ಪ (40) ಎಂಬಾತನನ್ನು ಕಾವೂರು ಪೊಲೀಸರು ಅಕ್ಟೋಬರ್ 12ರಂದು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಾರ್ಕಬನಹಳ್ಳಿ ನಿವಾಸಿ ಶಿವಲಿಂಗಪ್ಪ, ಉರುಂಡಾಡಿಗುಡ್ಡೆಯ ಬಾಡಿಗೆ ಮನೆಯಲ್ಲಿ ಪತ್ನಿ ಸೋನಾಲಿ ಅವರೊಂದಿಗೆ ವಾಸವಾಗಿದ್ದನು. ಅನೈತಿಕ ಸಂಬಂಧದ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 12ರಂದು ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(2) ಮತ್ತು 238ರಂತೆ ಪ್ರಕರಣ ದಾಖಲಾಗಿದೆ.



