Home ಅಪರಾಧ ಲೋಕ ಬೆಳ್ತಂಗಡಿ : ಕೋಳಿ ಅಂಕದ ಮೇಲೆ ವೇಣೂರು ಪೊಲೀಸರ ದಾಳಿ 17 ವಾಹನಗಳು ವಶಕ್ಕೆ 27...

ಬೆಳ್ತಂಗಡಿ : ಕೋಳಿ ಅಂಕದ ಮೇಲೆ ವೇಣೂರು ಪೊಲೀಸರ ದಾಳಿ 17 ವಾಹನಗಳು ವಶಕ್ಕೆ 27 ಮಂದಿ ವಿರುದ್ದ ಪ್ರಕರಣ ದಾಖಲು

0
2

ಬೆಳ್ತಂಗಡಿ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿ, ನಾಲ್ಕು ಹುಂಜ ಕೋಳಿಗಳು ಹಾಗೂ 17 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಡಕೋಡಿ ಗ್ರಾಮದ ಕಿರಿಂಬಿ ಎಂಬಲ್ಲಿ ನಡೆದಿದೆ.

ವೇಣೂರು ಠಾಣೆ ಪಿಎಸ್‌ಐ ಅಕ್ಷಯ್ ಡವಗಿ ಅವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಕರಿಮಣೇಲು, ಹೊಸಂಗಡಿ, ಬಡಕೋಡಿ ಭಾಗದಲ್ಲಿ ಸೆ.20 ರಂದು ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಬೀಟ್ ಸಿಬ್ಬಂದಿ ಪುಂಡಲಿಕಪ್ಪ ಅವರಿಗೆ ಬಡಕೋಡಿ ಗ್ರಾಮದ ಕಿರಿಂಬಿ ಬಳಿ ಅಕ್ರಮ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.ಮಾಹಿತಿಯಂತೆ ಸಂಜೆ ಸುಮಾರು 4.30ಕ್ಕೆ ಕಿರಿಂಬಿ ಸರ್ಕಾರಿ ಕೆರೆಯ ಬಳಿ ಪೊಲೀಸರು ತಲುಪಿದಾಗ, ಸುಮಾರು 25 ರಿಂದ 30 ಮಂದಿ ಗುಂಪಾಗಿ ಸೇರಿಕೊಂಡಿರುವುದು ಕಂಡುಬಂದಿದೆ. ಕೆಲವರ ಕೈಯಲ್ಲಿ ಹುಂಜ ಕೋಳಿಗಳಿದ್ದು, ಎರಡು ಕೋಳಿಗಳ ಕಾಲಿಗೆ ಹರಿತವಾದ ಬಾಲು ಕತ್ತಿ ಕಟ್ಟಿ ಪರಸ್ಪರ ಕಾದಾಡಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿತರು ಕೋಳಿಗಳನ್ನು ಹಿಡಿದುಕೊಂಡು ವಿವಿಧ ದಿಕ್ಕುಗಳಲ್ಲಿ ಓಡಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಬಡಕೋಡಿ ಗ್ರಾಮದ ಕಿರಿಂಬೆ ನಿವಾಸಿ ಕೃಷ್ಣಪ್ಪ ಮಗ ಸುನೀಲ್ (34) ಹಾಗೂ ಹೊಸಂಗಡಿ ಗ್ರಾಮದ ಪೃಥ್ವಿ ನಿವಾಸದ ವಾಸು ಮೂಲ್ಯ ಮಗ ವಿಶ್ವನಾಥ (36) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಗಿಡಗಂಟಿಗಳಿಗೆ ಕಟ್ಟಿ ಹಾಕಲಾಗಿದ್ದ 4 ಹುಂಜ ಕೋಳಿಗಳು ಪತ್ತೆಯಾಗಿದ್ದು, ಅವುಗಳ ಪೈಕಿ ಒಂದು ಕೋಳಿಯ ಕಾಲಿಗೆ ಹರಿತವಾದ ಬಾಲು ಕತ್ತಿ ಕಟ್ಟಿರುವುದು ಕಂಡುಬಂದಿದೆ. ಅಲ್ಲದೆ ಸ್ಥಳದಲ್ಲಿ ರಕ್ತದ ಕಲೆಗಳು ಹಾಗೂ ಕೋಳಿಗಳ ರೆಕ್ಕೆ-ಪುಕ್ಕಗಳು ಬಿದ್ದಿದ್ದು, ಕೋಳಿ ಅಂಕ ನಡೆದಿರುವ ಕುರುಹುಗಳು ಪತ್ತೆಯಾಗಿವೆ.ಸ್ಥಳದಿಂದ ಸುಮಾರು 50 ಮೀಟರ್ ದೂರದಲ್ಲಿ ನಿಲ್ಲಿಸಲಾಗಿದ್ದ 17 ದ್ವಿಚಕ್ರ ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವು ಪರಾರಿಯಾದ ಆರೋಪಿತರಿಗೆ ಸೇರಿದ ವಾಹನಗಳೆಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಸಂಪತ್ ವೇಣೂರು, ಸುಶಾನ್ ಕುರ್ಲೊಟ್ಟು, ಪ್ರಶಾಂತ್ ಕುರ್ಲೊಟ್ಟು, ಭರತ್ ಹೊಸಂಗಡಿ, ಹರೀಶ್ ಹೊಸಂಗಡಿ, ಸುರೇಂದ್ರ ಪೆರಿಂಜೆ, ಇಬ್ರಾಹಿಂ ವೇಣೂರು, ಶಾಹಿದ್ ವೇಣೂರು, ನಾಗೇಶ್ ವೇಣೂರು, ಸತೀಶ್ ಕುರ್ಲೊಟ್ಟು, ಶಿವಾನಂದ ಕಿರಿಂಬೆ, ಪ್ರದೀಪ್ ಪೆರಿಂಜೆ, ಕಿರಣ್ ಪೆರಿಂಜೆ, ದೀಕ್ಷಿತ್ ನೀರೋಲ್ಬೆ, ಸತೀಶ್ ನೀರೋಲ್ಬೆ, ಲೋಕೇಶ್ ನೀರೋಲ್ಬೆ, ಗಣೇಶ್ ಮಡಿವಾಳ ಪೆರಿಂಜೆ, ಹರೀಣ್ ಸುವರ್ಣ ಮುದ್ದಾಡಿ, ಸುನೀಲ್ ಮೂಡುಕೋಡಿ, ನಿತ್ಯಾನಂದ ಕರೀಮಣೇಲು, ಶಿವಪ್ರಸಾದ್ ಕಲ್ಕಡ್ತಿಮಾರ್, ಮಹೇಶ್ ಪಿಲಕೊಡಂಗೆ, ಪ್ರವೀಣ್ ಕುಮಾರ್ ಕುಕ್ಕಿಪಾಡಿ, ಸುದೀಕ್ಷ್ ಸಾವ್ಯ ಸೇರಿದಂತೆ ಒಟ್ಟು 27 ಮಂದಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿತರು ಹಣವನ್ನು ಪಣವಾಗಿಟ್ಟು ಅಕ್ರಮ ಕೋಳಿ ಅಂಕ ಆಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93, ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ 3, 11(1)(m)(ii), 11(1)(n) ಹಾಗೂ ಬಿಎನ್‌ಎಸ್ 2023ರ ಕಲಂ 112ರ ಅಡಿಯಲ್ಲಿ ಪ್ರಕರಣ ದಾಖಲಾಯಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here