Home ಬ್ರೇಕಿಂಗ್‌ ನ್ಯೂಸ್ ಧರ್ಮಸ್ಥಳ ಸೌಜನ್ಯ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಧರ್ಮಸ್ಥಳ ಸೌಜನ್ಯ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

1
0

ಹೊಸದಿಲ್ಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ವಿಶೇಷ ತನಿಖಾ ತಂಡ (SIT) ರಚಿಸಿ ಮೂರು ತಿಂಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಪ್ರಕರಣ ನಡೆದು 14 ವರ್ಷಗಳ ಬಳಿಕ ಮರು ತನಿಖೆಗೆ ನ್ಯಾಯಾಲಯ ಆದೇಶ ನೀಡಿರುವುದು ಒಂದು ಮಹತ್ವದ ಬೆಳವಣಿಗೆಯಾಗಿದೆ.

2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಗೀಡಾಗಿದ್ದರು. ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಸ್ಥಳೀಯ ಪೊಲೀಸರು ನಡೆಸಿದ್ದು, ಬಳಿಕ ಸಿಐಡಿ ಹಾಗೂ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯ ಬಳಿಕ ಸಂತೋಷ್ ರಾವ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ, 2023ರ ಜೂನ್ 16ರಂದು ಸಿಬಿಐ ವಿಶೇಷ ನ್ಯಾಯಾಲಯವು ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು.

ಖುಲಾಸೆ ಬಳಿಕ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಲು ಮರುತನಿಖೆ ನಡೆಸಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿತ್ತು. ಸೌಜನ್ಯ ಕುಟುಂಬವೂ ಮರುತನಿಖೆಗೆ ಆಗ್ರಹಿಸಿತ್ತು. 2024ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮರುತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆದಿತ್ತು.

2026ರಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಮರುತನಿಖೆ ನಡೆಸುವ ವಿಧಾನ ಮತ್ತು ಯಾವ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂಬ ವಿಚಾರದಲ್ಲಿ ವಾದ-ಪ್ರತಿವಾದಗಳು ನಡೆದಿದ್ದವು. ರಾಜ್ಯ ಸರ್ಕಾರವೂ ಅಗತ್ಯವಿದ್ದಲ್ಲಿ SIT ರಚಿಸಲು ಸಿದ್ಧವಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಇದೀಗ ಸುಪ್ರೀಂ ಕೋರ್ಟ್ SIT ಮೂಲಕ ಮರುತನಿಖೆಗೆ ಅವಕಾಶ ನೀಡಿದ್ದು, ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದು ಪ್ರಕರಣದಲ್ಲಿ ಮಹತ್ವದ ತಿರುವಾಗಿದೆ. ತನಿಖೆಯ ಬಳಿಕ ಸೌಜನ್ಯ ಪ್ರಕರಣದ ನೈಜ ಘಟನೆಗಳ ಕುರಿತು ಯಾವ ಅಂಶಗಳು ಬೆಳಕಿಗೆ ಬರುತ್ತವೆ ಎಂಬುದು ಕುತೂಹಲಕ್ಕೆ ಕಾರಣವಗಿದೆ.

LEAVE A REPLY

Please enter your comment!
Please enter your name here