Home ರಾಜಕೀಯ ಸಮಾಚಾರ ಶೇಖರ ಕುಕ್ಕೇಡಿ ರಾಜೀನಾಮೆ ಹಿಂಪಡೆಯಲು ಮುಖಂಡರುಗಳ ಒತ್ತಡ ಮನವೊಲಿಕೆಗೆ ಯತ್ನ

ಶೇಖರ ಕುಕ್ಕೇಡಿ ರಾಜೀನಾಮೆ ಹಿಂಪಡೆಯಲು ಮುಖಂಡರುಗಳ ಒತ್ತಡ ಮನವೊಲಿಕೆಗೆ ಯತ್ನ

2
0

ಬೆಳ್ತಂಗಡಿ;  ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆ ಸೇರಿದಂತೆ ದಲಿತ , ಆದಿವಾಸಿ ಸಮುದಾಯದ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ , ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ಮುಖಂಡರು ಸೇರಿದಂತೆ ಸಚಿವರುಗಳು ರಾಜೀನಾಮೆ ನಿರ್ಧಾರದಲ್ಲಿ ಮುಂದುವರಿದ ವರಿಯದಂತೆ ಒತ್ತಡ ಹೇರುತ್ತಿದ್ದಾರೆ.

ಕಳೆದ ಎರಡುವರೆ ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ , ಜಿಲ್ಲಾ ಪಂಚಾಯತ್ ಸದಸ್ಯರಾಗಿ , ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ , ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷರಾಗಿ ದುಡಿದಿರುವ ಶೇಖರ್ ಕುಕ್ಕೇಡಿ ಶುಕ್ರವಾರ ರಾತ್ರಿಯಿಂದಲೇ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು. ಶನಿವಾರ ಬೆಳಗ್ಗೆ ನೀಡಿದ ರಾಜಿನಾಮೆಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಸಮಸ್ಯೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಶೇಖರ್ ಕುಕ್ಕೇಡಿಯವರನ್ನು ಸಂಪರ್ಕಿಸುವ ಕಾರ್ಯ ಕೆಲವು ಕಾಂಗ್ರೆಸ್ ನಾಯಕರುಗಳು ಪ್ರಯತ್ನ ನಡೆಸಿದ್ದರು. ರಾಜೀನಾಮೆ ಹಿಂಪಡೆಯುವಂತೆ ಒತ್ತಡ ಹೇರಿದ್ದರು.
ಶನಿವಾರ ಬೆಳಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾಜಿ ಸಚಿವ ಬಿ‌ ರಮಾನಾಥ ರೈರವರ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖ ನಾಯಕರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶೇಖರ್ ಕುಕ್ಕೇಡಿ ಸಮುದಾಯದ ಪರವಾಗಿ ಸರ್ಕಾರದ ಮುಂದಿಟ್ಟ ಬೇಡಿಕೆಗಳನ್ನು ಪೂರೈಸಲು ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮ ಜಾರಿಗೊಳಿಸಲು ಒತ್ತಾಯಿಸಿದ್ದಾರೆ ಮತ್ತು ಈ ಬೇಡಿಕೆಗಳ ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿರುವುದಾಗಿ ತಿಳಿದು ಬಂದಿದೆ.

ಆದಿದ್ರಾವಿಡ ಸಮುದಾಯದ ಅವಳಿ ವೀರರ ಮೂಲಕ್ಷೇತ್ರ ಅಲೇರಿ ಕ್ಷೇತ್ರದ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ 5 ಕೋಟಿ ರೂಪಾಯಿಗಳನ್ನು ತಿಂಗಳೊಳಗೆ ಬಿಡುಗಡೆ ಮಾಡುತ್ತೇವೆ ಮತ್ತು ಇನ್ನುಳಿದ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವ ಬಗ್ಗೆ ಖುದ್ದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಸಮುದಾಯದ ಮುಖಂಡರುಗಳಿಗೆ ಹೇಳಿದ್ದಾರೆ ಎನ್ನಲಾಗಿದ್ದು. ಡಿಸಿ ಮನ್ನಾ ಜಮೀನು ಹಂಚಿಕೆಗೆ ಸಂಬಂಧಿಸಿದ ಕಾನೂನು , ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದೀಗ ದಲಿತ , ಆದಿವಾಸಿ ಸಮುದಾಯದ ನಾಯಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿರುವ ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಕಾಂಗ್ರೆಸ್ ಪಕ್ಷ ನಿಮ್ಮನ್ನು ನಡು ನೀರಿನಲ್ಲಿ ಕೈಬಿಡುವುದಿಲ್ಲ ಎಂದು ವಾಗ್ದಾನ ನೀಡುವ ಮೂಲಕ ಸಮಾಧಾನ ಪಡಿಸುತ್ತಿದ್ದು , ಒಂದೆರಡು ದಿನಗಳಲ್ಲಿ ಶೇಖರ್ ಕುಕ್ಕೇಡಿಯವರನ್ನು ಮನವೊಲಿಸಿ ರಾಜಿನಾಮೆ ಹಿಂಪಡೆಯುವ ವಿಶ್ವಾಸವನ್ನು ನಾಯಕರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಪ್ರಭಾವಿ ನಾಯಕ , ಮಾಜಿ ಸಚಿವ ಬಿ. ರಮಾನಾಥ ರೈರವರು ಬೆಳ್ತಂಗಡಿ ತಾಲೂಕಿನ ಪ್ರವಾಸ ಕೈಗೊಂಡಿದ್ದು , ಕುಕ್ಕೇಡಿ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here