ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ನೂರು ಕಾವು ಎಂಬಲ್ಲಿ ಜೂನ್ 19ರಿಂದ 20ರ ನಡುವಿನ ಅವಧಿಯಲ್ಲಿ ನಡೆದ ಓಮ್ನಿ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ರಾಜ್ಯ ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅ.ಕ್ರ. 94/2026ರಂತೆ ಬಿಎನ್‌ಎಸ್ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐಗಳಾದ ಗುಣಪಾಲ ಜೆ. ಹಾಗೂ ಸುಷ್ಮಾ ಜಿ. ಭಂಡಾರಿ ನೇತೃತ್ವದ ತನಿಖಾ ತಂಡವು ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರನ್ನು ಕೇರಳ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ. (25), ಮೊಹಮ್ಮದ್ ಆಸೀಕ್ (25), ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡಿನ ಕರೂರು ನಿವಾಸಿ ಶಕ್ತಿವೇಲು ಜಿ. (24) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕಳ್ಳತನವಾಗಿದ್ದ ಸುಮಾರು ₹2.5 ಲಕ್ಷ ಮೌಲ್ಯದ ಓಮ್ನಿ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ₹1 ಲಕ್ಷ ಮೌಲ್ಯದ ಕೆಟಿಎಂ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಓಮ್ನಿ ಕಾರನ್ನು ಕಳವು ಮಾಡಿ ಕೇರಳಕ್ಕೆ ಸಾಗಿಸಿ, ಬಳಿಕ ತಮಿಳುನಾಡಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ತಮಿಳುನಾಡಿನಲ್ಲಿ ವಾಹನವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಕೇರಳದ ಬದಿಯಡ್ಕ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿಯೂ ಕಳ್ಳತನ ಪ್ರಕರಣಗಳು ಈಗಾಗಲೇ ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.










