
ಬೆಳ್ತಂಗಡಿ; ಉಜಿರೆ ಪೇಟೆಯಲ್ಲಿ ರಿಕ್ಷಾ ಪಾರ್ಕಿಂಗ್ ಗೆ ಉಂಟಾಗಿರುವ ಸಮಸ್ಯೆ ಕುರಿತು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಶನಿವಾರ ಬೆಳ್ತಂಗಡಿಯ ಎಸ್ ಡಿಎಂ ಕಲಾಮಂದಿರದಲ್ಲಿ ಸಭೆ ಜರುಗಿತು.
ಉಜಿರೆಯಲ್ಲಿ ರಿಕ್ಷಾ ಪಾರ್ಕಿಂಗ್ ಬಹುಕಾಲದ ಸಮಸ್ಯೆಯಾಗಿದ್ದು ಇದೀಗ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದ ಬಳಿಕ ಇದು ಇನ್ನಷ್ಟು ಬಿಗಡಾಯಿಸಿದ್ದು ಹಲವು ಕಡೆಗಳಲ್ಲಿ ರಿಕ್ಷಾ ಪಾರ್ಕಿಂಗ್ ಗೆ ಜಾಗವಿಲ್ಲವಾಗಿ ರಿಕ್ಷಾ ಚಾಲಕರು ಸಾಕಷ್ಟು ಕಷ್ಟ ಎದುರಿಸುತ್ತಿದ್ದಾರೆ.
ಉಜಿರೆಯಲ್ಲಿ ಬೆಳಾಲು, ಸೋಮಂತಡ್ಕ, ಗುರಿಪಳ್ಳ, ಸುರ್ಯ, ಬಸ್ ನಿಲ್ದಾಣ, ಚಾರ್ಮಾಡಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ರಿಕ್ಷಾ ಪಾರ್ಕಿಂಗ್ ಇದೆ.ಆದರೆ ಇಲ್ಲಿ ಪಾರ್ಕಿಂಗಿಗೆ ಜಾಗದ ಕೊರತೆಯೂ ಇದೆ.ಇದರಿಂದ ರಿಕ್ಷಾ ಚಾಲಕರಿಗೆ,ವರ್ತಕರಿಗೆ ತೊಂದರೆ ಉಂಟಾಗುತ್ತಿದೆ. ಅಂಗಡಿಗಳ ಮುಂಭಾಗ, ರಸ್ತೆ ವ್ಯಾಪ್ತಿ ಸೇರಿದಂತೆ ಅಲ್ಲಲ್ಲಿ ರಿಕ್ಷಾಗಳನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ.
ರಿಕ್ಷಾ ಪಾರ್ಕಿಂಗ್ ಸಮಸ್ಯೆ ಕುರಿತು ಉಜಿರೆಯ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಇದರ ಬಗ್ಗೆ ಸಭೆ ಕರೆದು ಮಾತನಾಡಿದ ಅವರು ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ, ಇತರ ವಾಹನ ಚಾಲಕರಿಗೆ, ಅಂಗಡಿ ಮಾಲಕರಿಗೆ ತೊಂದರೆ ಉಂಟಾಗದಂತೆ ಹೆದ್ದಾರಿ ಬದಿ ಗುರುತು ಹಾಕಿ ರಿಕ್ಷಾ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿಕೊಡಲಾಗುವುದು.ಇದಕ್ಕೆ ಸಾರ್ವಜನಿಕರ ಸಹಿತ ಎಲ್ಲರೂ ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಬೆಳ್ತಂಗಡಿ ಸಂಚಾರಿ ಠಾಣೆಯ ಎಸ್ ಐ ಕಿಶೋರ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಇ ಚಂದ್ರಶೇಖರ್, ಆರ್ ಟಿಒ ಚರಣ್, ಉಜಿರೆ ಗ್ರಾಪಂ ಪಿಡಿಒ ಪ್ರಕಾಶ್ ಶೆಟ್ಟಿ, ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಉಮೇಶ್, ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್., ರವಿಕುಮಾರ್ ಬರೆಮೇಲು ಮತ್ತಿತರರು ಉಪಸ್ಥಿತರಿದ್ದರು











