Home ಅಂಕಣಗಳು ಬೆಳ್ತಂಗಡಿ : ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ ಪ್ರಕರಣಬಡ್ಡಿ ಸಹಿತ ಠೇವಣಿ ಹಿಂದಿರುಗಿಸಲು ಗ್ರಾಹಕರ...

ಬೆಳ್ತಂಗಡಿ : ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ ಪ್ರಕರಣಬಡ್ಡಿ ಸಹಿತ ಠೇವಣಿ ಹಿಂದಿರುಗಿಸಲು ಗ್ರಾಹಕರ ನ್ಯಾಯಾಲಯ ಆದೇಶ

1
0

ಬೆಳ್ತಂಗಡಿ: ನಗರದ ರಾಮನಗರದಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಅಂದಾಜು ರೂ.30.45 ಕೋಟಿಗೂ ಅಧಿಕ ಹಣ ದುರುಪಯೋಗ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಹಕರ ನ್ಯಾಯಾಲಯಕ್ಕೆ ನೀಡಿ ದೂರಿನ ವಿಚಾರಣೆ ನಡೆದಿದ್ದು, ದೂರುದಾರರಾದ ದಯಾನಂದ ನಾಯಕ್ ಸೇರಿದಂತೆ 28 ಮಂದಿ ಗ್ರಾಹಕರಿಗೆ ಆಡಳಿತ ಮಂಡಳಿ 45 ದಿವಸದ ಒಳಗೆ ಶೇ.6 ಬಡ್ಡಿ ಸೇರಿಸಿ, ಅವರ ಠೇವಣಿಗಳನ್ನು ಹಿಂತಿರುಗಿಸುವಂತೆ ನ್ಯಾಯಾಲಯದ ಆದೇಶ ನೀಡಿದೆ.

ಅದಲ್ಲದೆ ಎಲ್ಲಾ 28 ಮಂದಿ ದೂರುದಾರರಿಗೆ ಉಂಟಾದ ಸೇವೆಯ ಕೊರತೆ, ಮಾನಸಿಕ ಯಾತನೆ ಮತ್ತು ಅನಾನುಕೂಲತೆಗಾಗಿ ತಲಾ ರೂ.25 ಸಾವಿರದಂತೆ ಪರಿಹಾರ ನೀಡಬೇಕು, ಮೊಕದ್ದಮೆಯ ವೆಚ್ಚವಾಗಿ ತಲಾ ರೂ.10 ಸಾವಿರದಂತೆ ಪಾವತಿಸಬೇಕು. ಒಂದು ವೇಳೆ ಈ ಆದೇಶ ಮಾಡಿದ ದಿನಾಂಕದಿಂದ ದೂರುದಾರರಿಗೆ 45 ದಿವಸದ ಒಳಗೆ ಬಡ್ಡಿ ಸಹಿತ ಠೇವಣಿ ಹಿಂದಿರುಗಿಸದಿದ್ದರೆ, ಅವರು ಇಟ್ಟ ಠೇವಣಿ ಮುಕ್ತಾಯ ದಿನದಿಂದ ಪಾವತಿ ಮಾಡುವವರೆಗೆ ಶೇ.8 ವಾರ್ಷಿಕ ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದ ನೀಡಿದ ಆದೇಶವನ್ನು ಪಾಲಿಸಲು ವಿಫಲವಾದರೆ ದೂರುದಾರರು ಆಡಳಿತ ಮಂಡಳಿ ವಿರುದ್ಧ ಸಿ.ಪಿ ಕಾಯ್ದೆ 2019ರ ಯು/ಎಸ್ 71/72 ರ ವಿರುದ್ಧ ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ತಿಳಿಸಲಾಗಿದೆ.

ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿನಲ್ಲಿ ನಾವು ಇಟ್ಟ ಠೇವಣಿಯನ್ನು ನೀಡದೆ ವಂಚನೆ ಮಾಡಿದ್ದಾರೆಂದು ಆರೋಪಿಸಿ, ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿದಂತೆ ಒಟ್ಟು 28 ಮಂದಿ ಗ್ರಾಹಕರು ಕಳೆದ 2024 ಡಿ.1 ರಂದು ಮಂಗಳೂರು ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ದೂರಿನ ವಿಚಾರಣೆ ಪೂರ್ತಿಗೊಳಿಸಿದ ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಧೀಶರು ಇದೀಗ ತೀರ್ಪು ನೀಡಿದ್ದಾರೆ.ದೂರುದಾರರ ಪರವಾಗಿ ನ್ಯಾಯವಾದಿ ಸುಳ್ಯದ ತಿಮ್ಮಯ್ಯ ಪಿ. ಅವರು ವಾದಿಸಿದ್ದರು.

ಪ್ರಕರಣದ ಹಿನ್ನಲೆ: ಬೆಳ್ತಂಗಡಿ ನಗರದ ರಾಮನಗರದ ವಿ.ಆರ್. ನಾಯಕ್ ಕಾಂಪೌಂಡ್‌ನಲ್ಲಿ ಸುಮಾರು 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿನಲ್ಲಿ ಗ್ರಾಹಕರಿಗೆ ಸೇರಿದ ಸುಮಾರು ರೂ. 30.45 ಕೋಟಿ ಹಣ ವಾಪಸ್ ಗ್ರಾಹಕರಿಗೆ ನೀಡದೆ ವಂಚನೆ ಮಾಡಿದ್ದಾರೆಂದು ಆರೋಪಿಸಿ, ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ಪ್ರಸ್ತುತ ಪುಂಜಾಲಕಟ್ಟೆಯಲ್ಲಿ ವಾಸವಾಗಿರುವ ದಯಾನಂದ ನಾಯಕ್, ನಿಧೀಶ್ ಡಿ. ನಾಯಕ್, ಶ್ರದ್ಧಾ ಬಿ, ಮಾಲಿನಿ ಟಿ. ರಾವ್, ತುಕರಾಮ್ ರಾವ್, ಅಕ್ಷಯಾ ಟಿ. ರಾವ್, ಅಕ್ಷತಾ ರಾವ್, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ. ಗಣೇಶ್ ಭಟ್, ವಿದ್ಯಾ ಭಟ್ ಸೇರಿ ೧೩ ಮಂದಿ ಗ್ರಾಹಕರು ಕಳೆದ ವರ್ಷ 2025 ಮೇ.22 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 2021 ರಿಂದ 2024 ರವರೆಗೆ ಬ್ಯಾಂಕ್‌ನಲ್ಲಿ ಜವಾಬ್ದಾರಿಯಲ್ಲಿದ್ದ ಸೊಸೈಟಿಯ ಸಿಇಒ ಚಂದ್ರಕಾಂತ್, ಅಧ್ಯಕ್ಷ ಸಿ.ಹೆಚ್ ಪ್ರಭಾಕರ್, ಉಪಾಧ್ಯಕ್ಷ ಸದಾನಂದ ಎಮ್, ನಿರ್ದೇಶಕರುಗಳಾದ ವಿಶ್ವನಾಥ ಆರ್. ನಾಯಕ್, ಪ್ರಮೋದ್ ಆರ್. ನಾಯಕ್, ವಿಶ್ವನಾಥ ಬಿ., ಜಗನ್ನಾಥ ಪಿ, ರತ್ನಾಕರ, ಸುಮ ದಿನೇಶ್, ನಯನ ಶಿವಪ್ರಸಾದ್, ಮೋಹನ್‌ದಾಸ್, ಕಿಶೋರ್ ಕುಮಾರ್ ಸೇರಿ ಒಟ್ಟು 12 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಿಐಡಿಗೆ ಹಸ್ತಾಂತರ: ರೂ.30.45 ಕೋಟಿ ವಂಚನೆ ಆರೋಪ ಪ್ರಕರಣವಾಗಿರುವ ಕಾರಣದಿಂದ ಈ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಸೈಬರ್ ಕ್ರೈಂ ಗೆ ಹಸ್ತಾಂತರ ಮಾಡಿದ್ದರು ಬಳಿಕ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಗಳು ಸಿಐಡಿಗೆ ಹಸ್ತಾಂತರಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದ ಅಧಿಕಾರಿಗಳು ತಂಡ ಕಳೆದ ಮಾ.18 ಹಾಗೂ ಮಾ.19 ಎರಡು ದಿನ ಬೆಳ್ತಂಗಡಿಯ ಸೊಸೈಟಿಗೆ ದಾಳಿ ಮಾಡಿ ತನಿಖೆ ನಡೆಸಿದ್ದರು. ಶೋಧ ಕಾರ್ಯಾಚರಣೆ ನಡೆಸಿ ಸೊಸೈಟಿಯಲ್ಲಿ ಗ್ರಾಹಕರಿಗೆ ಮತ್ತು ಸೊಸೈಟಿಗೆ ಸಂಬಂಧಿಸಿದ ಪ್ರಮುಖ ದಾಖಲೆ ಪತ್ರಗಳು, ಕಂಪ್ಯೂಟರಿನ ಮೂರು ಹಾರ್ಡ್ಡಿಸ್ಕ್, ಎಸ್.ಎಸ್.ಡಿ, ಒಂದು ಸಿಸಿ ಕ್ಯಾಮಾರದ ಡಿವಿಆರ್, ಸೊಸೈಟಿಯ ಭದ್ರತಾ ಠೇವಣಿ ಇರಿಸಿರುವ 17 ಲಕ್ಷದ ಚೆಕ್, 80 ಗ್ರಾಂ ಚಿನ್ನಾಭರಣಗಳು ಸೇರಿ ಹಲವು ವಸ್ತುಗಳನ್ನು ಸರಕಾರಿ ಪಂಚರುಗಳ ಸಮ್ಮುಖದಲ್ಲಿ ಮಹಜರು ಮಾಡಿ ವಶಪಡಿಸಿಕೊಂಡು, ಸಂಘದ ಕಚೇರಿ ಕೀಯನ್ನು ಸಹಕಾರಿ ಇಲಾಖೆಯ ಸಿಡಿಒಗೆ ನೀಡಿ ವಾಪಸ್ ತೆರಳಿದ್ದರು. ಈ ತನಿಖೆಯ ವರದಿ ಇನ್ನಷ್ಟೇ ಬರಬೇಕಾಗಿದೆ.

LEAVE A REPLY

Please enter your comment!
Please enter your name here