Home ಅಪಘಾತ ಪೆರಿಯಶಾಂತಿಯಲ್ಲಿ ಭೀಕರ ಬೈಕ್ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ

ಪೆರಿಯಶಾಂತಿಯಲ್ಲಿ ಭೀಕರ ಬೈಕ್ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ

0
4

ಬೆಳ್ತಂಗಡಿ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ  ಪೆರಿಯಶಾಂತಿ ಎಂಬಲ್ಲಿ ಬುಧವಾರ ಬೆಳಗ್ಗೆ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಮೃತಪಟ್ಟವರನ್ನು ಕಾಸರಗೋಡು ಜಿಲ್ಲೆಯ ಏರಿಕ್ಕುಲಮ್ ನಿವಾಸಿ ರಿಜೇಶ್.ವಿ (33) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮತ್ತೋರ್ವ ಬೈಕ್ ಸವಾರನನ್ನು ಕೊಕ್ಕಡ ಗ್ರಾಮದ ಹಳಿಂಗೇರಿ ನಿವಾಸಿ ಹಾಗೂ ಸಂಗಮ್ ಪಿಕಪ್ ವಾಹನ ಚಾಲಕ ಗಿರೀಶ್ ಎಂದು ಗುರುತಿಸಲಾಗಿದೆ.

ಲಭ್ಯ ಮಾಹಿತಿಯ ಪ್ರಕಾರ, ಗಿರೀಶ್ ಅವರು ಗುಂಡ್ಯದಿಂದ ಕೊಕ್ಕಡ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದು, ಪೆರಿಯಶಾಂತಿ ಸಮೀಪ ತಮ್ಮ ಬೈಕ್‌ನ್ನು ಕೊಕ್ಕಡದ ಕಡೆಗೆ ತಿರುಗಿಸುವ ವೇಳೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಆ ಬೈಕ್‌ನಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ರಿಜೇಶ್ ಅವರು ಅಪಘಾತದ ತೀವ್ರತೆಗೆ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಗಿರೀಶ್ ಅವರನ್ನು ಸ್ಥಳೀಯರು ಹಾಗೂ ಸಾರ್ವಜನಿಕರ ಸಹಕಾರದಿಂದ ತಕ್ಷಣ ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ರಿಜೇಶ್ ಅವರ ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ತನಿಖೆ ಮುಂದುವರಿದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಿ ಸಂಚರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಇಂತಹ ದುರಂತಗಳನ್ನು ತಡೆಯಲು ಅಗತ್ಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

NO COMMENTS

LEAVE A REPLY

Please enter your comment!
Please enter your name here