ಬೆಳ್ತಂಗಡಿ; ಆಕಸ್ಮಿಕ ಅಗ್ನಿ ಅವಘಡದಿಂದ ಸ್ಕೂಟರ್ ಹೊತ್ತಿ ಉರಿಯುವ ವೇಳೆ ಅದರಲ್ಲಿ ಪ್ರಯಾಣಿಸುತ್ತಿದ್ದ ಯೋಧ ಹಾಗೂ ಅವರ ಎಳೆಯ ಮಗುವು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಶೀಘ್ರ ಆರೋಗ್ಯ ಚೇತರಿಕೆಗಾಗಿ ಇತರ ಯೋಧರು ಮತ್ತು ಮಾಜಿ ಯೋಧರು ಸರ್ವಧರ್ಮೀಯ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಭಾರತೀಯತೆ ಎತ್ತಿಹಿಡಿದ್ದಿದ್ದಾರೆ.
ಬೆಳಾಲು ಗ್ರಾಮದ ಕಾಡಂಡ ನಿವಾಸಿ ಯೋಧ ಮೋಹನ ಗೌಡ ಕೆ ಮತ್ತು ಪುತ್ರ ದಿಯಾನ್ ಅವರು ಪ್ರಯಾಣಿಸುತ್ತಿದ್ದ ಸ್ಕೂಟರ್ ಅಗ್ನಿಗೆ ತುತ್ತಾಗಿ ಹೊತ್ತಿಉರಿದಿತ್ತು. ಈ ವೇಳೆ ಮೋಹನ ಗೌಡ ಅವರು 40 ಶೇಕಡ ಸುಟ್ಟ ಗಾಯಕ್ಕೊಳಗಾದರೆ ಅವರ ಮಗು ದಿಯಾನ್ 75 ಶೇಕಡಕ್ಕೂ ಅಧಿಕ ಸುಟ್ಟಗಾಯಗಳೊಂದಿಗೆ ತೀವ್ರ ಸ್ವರೂಪದ ಗಾಯಕ್ಕೊಳಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ.
ಅವರ ಶೀಘ್ರ ಗುಣಮುಖತೆಗಾಗಿ,
ದೇಶ ರಕ್ಷಣೆ ಮಾಡುತ್ತಿರುವ ಮತ್ತು ಸೇವಾ ನಿವೃತ್ತಿ ಪಡೆದಿರುವ ಎಲ್ಲಾ ಧರ್ಮದ ವೀರ ಯೋಧರು ಒಟ್ಟಾಗಿ ಜೂ.19 ರಂದು ತಮ್ಮ ಸೈನಿಕ ಮಿತ್ರನ ಮಗುವಿನ ಆರೋಗ್ಯಕ್ಕಾಗಿ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನಾ ಕಾರ್ಯದಲ್ಲಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಆಡಳಿತ ವರ್ಗ, ಮಂಞನೊಟ್ಟು ದರ್ಗಾಶರೀಫ್ ಧರ್ಮ ಗುರುಗಳು, ಲಾಯಿಲ ಓಸಿಡಿ ಚರ್ಚ್ ನ ಧರ್ಮಗುರು ರೆ.ಫಾ ಟೋಮಿ ಇವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅವರ ಜೊತೆಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ರಿ. ದ.ಕ ಜಿಲ್ಲೆ ಇದರ ಗೌರವಾಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಂಚೋಡು, ತಾಲೂಕು ಘಟಕದ ಅಧ್ಯಕ್ಷ ಎನ್ ಪಿ ತಂಗಚ್ಚನ್, ಹಾಗೂ ಪದಾಧಿಕಾರಿಗಳಾದ ರವಿ ಪ್ರಸಾದ್, ದೇವಪ್ರಸಾದ್ ಗೌಡ, ವಾಲ್ಟರ್ ಸಿಕ್ವೇರಾ, ಫ್ರಾನ್ಸಿಸ್ ಜೆ, ಸುರೇಶ್ ಗೌಡ ಹೆಚ್, ಯೋಗೀಶ್ ಗೌಡ, ಅಶೋಕ್ ಕುಮಾರ್, ಶಾಜಿ, ಅಪಘಾತ ಸಂತ್ರಸ್ತ ಸೈನಿಕ ಸದಸ್ಯ ಮೋಹನ್ ಗೌಡ ಅವರ ಬಾಲ್ಯದ ಮಿತ್ರ ಸುಲೈಮಾನ್ ಭೀಮಂಡೆ, ಮೋಹನ್ ಗೌಡರ ಸಂಬಂಧಿ ಜಯಣ್ಣ, ಸೈನಿಕ ಪ್ರೇಮಿ ದಯಾನಂದ ಬೆಲಾಲ್ ಇವರು ಭಾಗವಹಿಸಿದ್ದರು.
ಮಗುವಿನ ಶಸ್ರ್ತ ಚಿಕಿತ್ಸೆಗಾಗಿ 2 ಸಾವಿರ ಸ್ಕ್ವಾರ್ ಸೆಂಟಿ ಮೀಟರ್ ಚರ್ಮ ಕೆಎಂಸಿ ಮಣಿಪಾಲದಿಂದ ಮಂಗಳೂರಿಗೆ
ಈ ಅಗ್ನಿ ಅವಘಡದ ವೇಳೆ ತಂದೆ ಮಗ ಇಬ್ಬರೂ ತಪ್ಪಿಸಲು ಯತ್ನಿಸಿದರೂ ಸ್ಕೂಟರ್ ನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಗಂಭೀರ ಸ್ವರೂಪದ ಸುಟ್ಟಗಾಯಕ್ಕೊಳಗಾಗಿದ್ದಾರೆ. ಈ ಪೈಕಿ ಮಗು ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಮುಂದುವರಿಯುತ್ತಿದೆ. ವೈದ್ಯರ ಸಲಹೆಯಂತೆ ಜೂ.20 ರಂದು ಮಗುವಿಗೆ ಚರ್ಮ ಜೋಡಣೆಯ ವಿಶೇಷ ಶಸ್ರ್ತ ಚಿಕಿತ್ಸೆ ನಡೆಯಬೇಕಿತ್ತು. ಅದಕ್ಕಾಗಿ ಕೆಎಂಸಿ ಮಣಿಪಾಲ ಸ್ಕಿನ್ ಬ್ಯಾಂಕ್‌ನಿಂದ 2 ಸಾವಿರ ಸ್ಕ್ವೇರ್ ಸೆಂಟಿ ಮೀಟರ್ ಚರ್ಮ ಮಂಗಳೂರಿಗೆ ತರಲಾಗಿತ್ತು. ಆದರೆ ಮಗುವಿನ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದು ಶಸ್ರ್ತ ಚಿಕಿತ್ಸೆ ಮುಂದೂಡಲಾಗಿದೆ.
ಇಂತಹಾ ಅಪರೂಪದ ಘಟನೆಗಳು ಆದಾಗ ಆಪರೇಷನ್ ಗೆ ಬೇಕಾದ ಚರ್ಮ ಮುಂಬೈ ಯಿಂದ ತರಬೇಕಾಗುತ್ತದೆ. ಅದೃಷ್ಟವಶಾತ್ ಅದು ಮಣಿಪಾಲ ಕೆಎಂಸಿ ಯಲ್ಲಿ ಸದ್ಯ ಲಭಿಸಿದೆ. ಅಲ್ಲಿ ಪ್ರೊಫೆಸರ್ ಆಗಿ ಕರ್ತವ್ಯದಲ್ಲಿರುವ, ಗೋಪಾಲಕೃಷ್ಣ ಭಟ್ ಕಾಂಚೋಡು ಅವರ ಪುತ್ರ ಸುದಿನ ಕುಮಾರ್ ಕಾಂಚೋಡು ಅವರು ವಿಶೇಷ ಮುತುವರ್ಜಿ ವಹಿಸಿದ್ದು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಡಾI ಗೋಪಾಲಕೃಷ್ಣ ಭಟ್ ಕಾಂಚೋಡು ಇವರು ಅವಘಡ ಸಂಭವಿಸಿದ ತಕ್ಷಣ ನಿವೃತ್ತ ಸೇನಾ ಅಧಿಕಾರಿ ಕರ್ನಲ್ ನಿತಿನ್ ಭಿಡೆ ಮುಂಡಾಜೆ (OIC ECHS Mangalore) ಇವರನ್ನು ಸಂಪರ್ಕಿಸಿದ್ದು ಫಾದರ್ಮುಲ್ಲರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟರು.







