ಬೆಳ್ತಂಗಡಿ: ಹೆದ್ದಾರಿ ಬದಿ ರಾಶಿ ರಾಶಿ ಕಸವನ್ನು ತಂದು ಬಿಸಾಕಿ ಹೋದವರ ವಿಳಾಸ ಪತ್ತೆ ಹಚ್ಚಿ ಅವರಿಗೆ ದಂಡನೆ ವಿಧಿಸಿದ ಘಟನೆ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ. ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಟಿ.ಬಿ. ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ಕಸ ಸೇರಿದಂತೆ ಇನ್ನಿತರ ಮನೆ ತ್ಯಾಜ್ಯಗಳನ್ನು ತಂದು ಬಿಸಾಕಿದ್ದು ಈ ಬಗ್ಗೆ ಸಾರ್ವಜನಿಕರು ಪಂಚಾಯತ್ ಗೆ ಮಾಹಿತಿ ನೀಡಿದಾಗ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ತಾರನಾಥ್ ನಾಯ್ಕ, ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳು ತೆರಳಿ ಪರಿಶೀಲಿಸಿ ಕಸ ಬಿಸಾಕಿದವರ ವಿಳಾಸ ಪತ್ತೆ ಹಚ್ಚಿ ಸ್ಥಳಕ್ಕೆ ಅವರನ್ನು ಬರ ಹೇಳಿದರಲ್ಲದೆ ರೂ 2, 000 ದಂಡ ವಿಧಿಸಿ ರಸ್ತೆ ಬದಿ ಕಸ ಬಿಸಾಕದಂತೆ ಎಚ್ಚರಿಕೆ ನೀಡಿದ್ದಾರೆ. ತಕ್ಷಣ ಸ್ಪಂದಿಸಿ ಕಸ ಬಿಸಾಕಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡ ಲಾಯಿಲ ಪಂಚಾಯತ್ ನ ಅಧಿಕಾರಿಗಳ ನಡೆ ಎಲ್ಲರ ಮೆಚ್ಚುಗೆ ಪಾತ್ರವಾಗಿದೆಯಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಕುವವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.








