ಬೆಳ್ತಂಗಡಿ : ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಗೆಳೆಯರೊಂದಿಗೆ ಬಂದಿದ್ದ ಅಪ್ರಾಪ್ತ 17 ವಯಸ್ಸಿನ ಮುಸ್ಲಿಂ ಧರ್ಮದ ಬಾಲಕನ ಮೇಲೆ ಬಜರಂಗದಳದ ಕಾರ್ಯಕರ್ತರ ತಂಡವೊಂದು ಅಮಾನುಷವಾಗಿ ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಭಜರಂಗದಳದ ಇಬ್ಬರು ಆರೋಪಿಗಳಾದ ಉಜಿರೆ ಗ್ರಾಮದ ಪೆರ್ಲ ನಿವಾಸಿ ರಮೇಶ್ ಪೂಜಾರಿ(43) ಮತ್ತು ನಡ ಗ್ರಾಮದ ಸುರ್ಯ ನಿವಾಸಿ ಗೌರವ್ ಶೆಟ್ಟಿ(25) ಯನ್ನು ಮಾ.26 ರಂದು ಉಜಿರೆಯ ಅತ್ತಾಜೆಯಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಂಜೆ ಹಾಜರುಪಡಿಸಲಾಗಿದ್ದು. ನ್ಯಾಯಾಲಯ ಇಬ್ಬರಿಗೂ ಜಾಮೀನು ಮಂಜೂರು ಮಾಡಲಾಗಿದೆ. ಆರೋಪಿಗಳ ಪರವಾಗಿ ವಕೀಲರಾದ ಸುಬ್ರಹ್ಮಣ್ಯ ಅಗರ್ತ ವಾದ ಮಂಡಿಸಿದರು.
ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ ಮಾ.11 ರಂದು ತನ್ನ ಸ್ನೇಹಿತರೊಂದಿಗೆ ಉಜಿರೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದಾನೆ ರಾತ್ರಿ 8.30 ರ ಸುಮಾರಿಗೆ ಜಾತ್ರೆಯಲ್ಲಿ ಆತನ ಸ್ನೇಹಿತರು ಜಾಯೆಂಟ್ ವೀಲ್ ಮೇಲೆ ಹತ್ತಿದ ಸಂದರ್ಭದಲ್ಲಿ ಅವರ ಮೊಬೈಲ್ ಹಿಡಿದುಕೊಂಡು ಸಮೀಪದಲ್ಲಿ ನಿಂತಿದ್ದ ಬಾಲಕನನ್ನು ಉಜಿರೆಯ ಬಜರಂಗದಳದ ಕಾರ್ಯಕರ್ತರು ಎನ್ನಲಾದ ಗೌರವ್ ಶೆಟ್ಟಿ ಹಾಗೂ ರಮೇಶ್ ಇತರರೊಂದಿಗೆ ಸೇರಿ ನೀನು ಮುಸ್ಲಿಮನಾ ಎಂದು ಪ್ರಶ್ನಿಸಿದ್ದಾರೆ ಹೌದು ಎಂದಾಗ ಆತನ ಮೇಲೆ ಇವರು ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈವೇಳೆ ಆತನ ಸ್ನೇಹಿತರು ಬಿಡಿಸಲು ಬಂದರೂ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಜಾತ್ರೆಯ ನಡುವೆ ಜನಸಂದಣಿ ಹೆಚ್ಚಾದಾಗ ಬಾಲಕನ್ನು ಅಲ್ಲಿಂದ ಬೈಕ್ ನಲ್ಲಿ ತಂಡ ಅಪಹರಿಸಿದ್ದು ಸುಮಾರು ಐದು ಕಿ.ಮೀ ದೂರದವರೆಗೆ ಕೊಂಡೊಯ್ದು ಅಲ್ಲಿ ನಿರ್ಜನ ಪ್ರದೇಶದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿಯ ತಂಡ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ.
ನೀವು ಬ್ಯಾರಿಗಳು ಟೆರರಿಸ್ಟ್ ಗಳು ನಿಮ್ಮನ್ನು ಕೊಂದರೆ ಒಬ್ಬ ಟೆರರಿಸ್ಟ್ ಅನ್ನು ಕೊಂದ ಹಾಗೆ ಎಂದು ಬೆದರಿಸಿದ್ದಾರೆ. ಅಲ್ಲದೆ ಬೆದರಿಕೆಯೊಡ್ಡಿ ಆತನ ವಿಡಿಯೋವನ್ನು ಮಾಡಿಕೊಂಡಿದ್ದಾರೆ ನಿರಂತರ ಹಲ್ಲೆ ನಡೆಸಿದ ಬಳಿಕ ತಡ ರಾತ್ರಿವೇಳೆ ಬಾಲಕನನ್ನು ಉಜಿರೆಯ ಬೆಳಾಲು ಕ್ರಾಸ್ ನ ಸಾಯಿರಾಂ ಕಟ್ಟಡದ ಬಳಿ ಬಿಟ್ಟು ಹೋಗಿದ್ದಾರೆ. ಇದನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು. ಇದಾದ ಬಳಿಕ ಆತನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಹೆದರಿದ ಬಾಲಕ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಮುಂದಾಗಿದ್ದ ಇದು ಮನೆಯವರ ಗಮನಕ್ಕೆ ಬಂದು ಕೂಡಲೇ ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೀಗ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.









