ಬೆಳ್ತಂಗಡಿ : ಕಾನೂನು ಬಾಹಿರವಾಗಿ ಸರಕು ಸಾಗಣೆ ಎರಡು ವಾಹನದಲ್ಲಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಬಳೆಂಜ ಶಾಲೆಯ ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ನೇತೃತ್ವದಲ್ಲಿ ಫೆ.9ರಂದು KA-21-A-8776 ಪಿಕಪ್ ಮತ್ತು KA-70-2596 ಟಿಪ್ಪರ್ ವಾಹನಗಳಿಗೆ ಮೂರು ಸಾವಿರ ಬಾಡಿಗೆ ನೀಡಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಸ್ಥಳೀಯ ನಾಲ್ಕೂರು ಅನಿಲ್ ಫಾರ್ಮ್ ಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದಿದ್ದ ವಿಡಿಯೋ ವೈರಲ್ ಅಗಿತ್ತು.
ಬೆಳ್ತಂಗಡಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಬಳೆಂಜ ಶಾಲೆಗೆ ಫೆ.12 ರಂದು ಭೇಟಿ ನೀಡಿ ವರದಿ ಮಾಡಿಕೊಂಡು ಅ ವರದಿಯನ್ನು ಮಂಗಳೂರು ಡಿಡಿಪಿಐ ಶಿಶಿಧರ್.ಜಿ.ಎಸ್ ಅವರಿಗೆ ವರದಿ ಸಲ್ಲಿಸಿದ್ದರು. ಬಳಿಕ ಡಿಡಿಪಿಐ ಅವರು ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರನ್ನು ಫೆ.12 ರಂದು ಮಧ್ಯಾಹ್ನ ವೇಳೆಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.




