Home ಸ್ಥಳೀಯ ಸಮಾಚಾರ ನೆರಿಯ ನೀಲಯ್ಯ ಮಲೆಕುಡಿಯ ಅವರಿಗೆ ಶ್ರದ್ದಾಂಜಲಿ ಸಭೆ

ನೆರಿಯ ನೀಲಯ್ಯ ಮಲೆಕುಡಿಯ ಅವರಿಗೆ ಶ್ರದ್ದಾಂಜಲಿ ಸಭೆ

0
2

ಬೆಳ್ತಂಗಡಿ: ನೀಲಯ್ಯ ಮಲೆಕುಡಿಯರು ಎಲ್ಲಾ ಧರ್ಮೀಯರನ್ನು ಸಹೋದರರಂತೆ ಕಂಡು , ಸಮಾಜದ ಸೌಹಾರ್ದತೆಗಾಗಿ ದುಡಿದ ನಾಯಕ ಎಂದು ನೆರಿಯ ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಯು.ಸಿ ಪೌಲೋಸ್ ಹೇಳಿದರು.

ಅವರು ನೆರಿಯ ಗ್ರಾಮದ ಕಲ್ಕಾರ್ ನಲ್ಲಿ ಹಿರಿಯ ಕಾಂಗ್ರೆಸ್ ನಾಯಕ , ಮಾಜಿ ನೆರಿಯ ಗ್ರಾಮ ಪಂಚಾಯತ್ ಸದಸ್ಯ , ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ನೀಲಯ್ಯ ಮಲೆಕುಡಿಯ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಒಂದು ನಿರ್ದಿಷ್ಟ ಪಕ್ಷದ ನಾಯಕರಾಗಿದ್ದರೂ ಎಲ್ಲರೊಂದಿಗೆ ಬೆರೆತು , ತನ್ನದೇ ರೀತಿಯಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ದುಡಿದ ನೀಲಯ್ಯ ಮಲೆಕುಡಿಯರು ಸಾವಿರಾರು ಜನರ ಪ್ರೀತಿಯನ್ನು ಸಂಪಾದನೆ ಮಾಡಿದ್ದಾರೆಯೇ ಹೊರತು ತನಗಾಗಿ ಒಂದು ಸೆನ್ಸ್ ಜಮೀನು , ಒಂದು ರೂಪಾಯಿ ಹಣವನ್ನು ಕೂಡ ಮಾಡಿಲ್ಲ ಎಂದ ಅವರು ನೀಲಯ್ಯ ಮಲೆಕುಡಿಯರ ಸ್ವಾರ್ಥ ರಹಿತ ಜೀವನ ಮೆಚ್ಚುವಂತಹದು ಎಂದರು.
ಬ್ಲಾಕ್ ಕಾಂಗ್ರೆಸ್ ಪಕ್ಷದ (ಗ್ರಾಮೀಣ) ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಮಾತನಾಡಿ ಪಕ್ಷಕ್ಕಾಗಿ ತನ್ನ ಅನಾರೋಗ್ಯ , ಪ್ರಾಯವನ್ನು ಲೆಕ್ಕಿಸದೆ ದುಡಿಯುತ್ತಿದ್ದ ಅವರು ಪ್ರತಿ ನಿತ್ಯವೂ ಗ್ರಾಮದ ರಸ್ತೆ , ಮೋರಿ , ಸೇತುವೆ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗಾಗಿ ನಿರಂತರವಾಗಿ ನನ್ನ ಹಾಗೂ ಪಕ್ಷದ ನಾಯಕರ ಜೊತೆಗೆ ಚರ್ಚೆ ನಡೆಸುತ್ತಿದ್ದ ನೀಲಯ್ಯ ಮಲೆಕುಡಿಯರು ಕೇವಲ ನೆರಿಯ ಗ್ರಾಮಕ್ಕೆ ಸೀಮಿತರಾದವರಲ್ಲ ಭೂ ನ್ಯಾಯ ಮಂಡಳಿ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಾವಿರಾರು ಜನರಿಗೆ ಜಮೀನು ಹಂಚಿಕೆ ಮಾಡುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅದರಿಂದ ತಾಲೂಕಿನ ಎಲ್ಲಾ ಗ್ರಾಮದಲ್ಲೂ ನೀಲಯ್ಯ ಮಲೆಕುಡಿಯರ ಸಹಿ ಇರುವ ಜಮೀನಿನ ದಾಖಲೆಪತ್ರಗಳು ಇದೆ ಎಂದ ಅವರು ನೆರಿಯ ಗ್ರಾಮ ಪಂಚಾಯತ್ ಸದಸ್ಯರಾಗಿ ಗ್ರಾಮದ ಅಭಿವೃದ್ಧಿಗಾಗಿ ದುಡಿದಿದ್ದಾರೆ ಎಂದರು. ಇತ್ತೀಚೆಗೆ ನಿಧನರಾಗುವ ತನಕವೂ ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಅವರು ಪಕ್ಷದ ದೊಡ್ಡ ಆಸ್ತಿಯಾಗಿದ್ದರು ಎಂದರು.

ನೆರಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಅಶ್ರಫ್ , ಪಕ್ಷದ ಹಿರಿಯ ನಾಯಕ ಪೂವಪ್ಪ ಪೂಜಾರಿ ರವರು ಮಾತನಾಡಿ ನೀಲಯ್ಯ ಮಲೆಕುಡಿಯರ ಗುಣಗಾನ ಮಾಡಿದರು.
ಮೊದಲಿಗೆ ಮೌನ ಪ್ರಾರ್ಥನೆ ಸಲ್ಲಿಸಿ , ಭಾವಚಿತ್ರಕ್ಕೆ ಪುಷ್ಪರ್ಚಾನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಜಯರಾಂ ಆಲಂಗಾರು , ಕಾಂಗ್ರೇಸ್ ಪರಿಶಿಷ್ಟ ಪಂಗಡ ಘಟಕದ ಬ್ಲಾಕ್ ಅಧ್ಯಕ್ಷ ಜಯಾನಂದ ಪಿಲಿಕಲ , ಆದಿವಾಸಿ ಮುಖಂಡ ಸುಕುಮಾರ್ ದಿಡುಪೆ , ನೆರಿಯ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಕೆ.ಎಸ್ , ಬಾಬು ಗೌಡ , ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ , ಎಂ.ಜೆ ವರ್ಗೀಸ್ , ಎಂ‌.ಜೆ ಸೆಬಾಸ್ಟಿಯನ್ , ಪಿ.ಕೆ ರಾಜನ್ , ನಂದ ಕುಮಾರ್ , ಉದ್ಯಮಿ ಆ್ಯಂಟನಿ ಅಣಿಯೂರು , ನೆರಿಯ ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕರಾದ ಕಮಲಾಕ್ಷ ಗೌಡ , ಲೀಲಾಧರ್ ಮಲೆಕುಡಿಯ , ಮಲೆಕುಡಿಯ ಸಂಘದ ನೆರಿಯ ಗ್ರಾಮ ಸಮಿತಿ ಅಧ್ಯಕ್ಷ ಗಂಗಯ್ಯ ಮಲೆಕುಡಿಯ ಹೇರಾಳ್, ಶೇಖರ ಲಾಯಿಲ, ಮಲೆಕುಡಿಯ ಸಂಘದ ಪದಾಧಿಕಾರಿಗಳು , ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಕಳುಹಿಸಿದ ನುಡಿ ನಮನ ಸಂದೇಶವನ್ನು ಕು. ಪುಷ್ಪ ನೆರಿಯ ವಾಚಿಸಿದರು.
ಕೇಶವ ಪರ್ಪಳ ಕಾರ್ಯಕ್ರಮ ನಿರ್ವಹಿಸಿದರು.

NO COMMENTS

LEAVE A REPLY

Please enter your comment!
Please enter your name here