
ಬೆಳ್ತಂಗಡಿ; ದೇವಸ್ಥಾನಕ್ಕೆಂದು ಹೊರಟು ಅಸಹಜ ವಾಗಿ ಸಾವನ್ನಪ್ಪಿದ ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15)ನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಆತನ ತಲೆಗೆ ಮೂರು ಬಲವಾದ ಪೆಟ್ಟು ಬಿದ್ದಿರುವುದು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ವೋಲೀಸರು ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆಯನ್ನು ಆರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಬಗೆಗಿನ ಮಾಹಿತಿಗಳು ಲಭ್ಯವಾಗುತ್ತಿದ್ದು ಬಾಲಕನ ತಲೆಗೆ ಕತ್ತಿ ಅಥವಾ ಇನ್ಯಾವುದೇ ಆಯುಧದಿಂದ ಬಲವಾದ ಮೂರು ಹೊಡೆತಗಳು ಬಿದ್ದಿದೆ. ಅರೆಪ್ರಜ್ಞಾವಸ್ತೆಯಲ್ಲಿ ಈತ ನೀರಿಗೆ ಬಿದ್ದಿರುವ ಸಾಧ್ಯತೆಯಿದೆ ಎನ್ನಲಾಗಿದ್ದು ಶ್ವಾಸಕೋಶದಲ್ಲಿ ನೀರು ತುಂಬಿರುವುದಾಗಿಯೂ ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿರುವುದಾಗಿ ತಿಳಿದು ಬಂದಿದೆ.
ಇದೊಂದು ಕೊಲೆ ಪ್ರಕರಣ ಎಂಬ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಿಂದಲೇ ದೃಢಪಟ್ಟಿದ್ದು ಇದೇ ಹಿನ್ನಲೆಯಲ್ಲಿ ಪೊಲೀಸರು ಸಮಗ್ರವಾದ ತನಿಖೆ ಮುಂದುವರಿದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟು ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿವಿಧ ತಂಡದಿಂದ ತಡ ರಾತ್ರಿಯಿಂದಲೇ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.
ಸುಮಂತ್ ಮೃತದೇಹ ಸಿಕ್ಕ ಸುತ್ತಮುತ್ತಲಿನಲ್ಲಿ FSL ತಂಡ, SOCO ತಂಡ, ಪೊಲೀಸರ ತಂಡದಿಂದ ಜ.14 ರಂದು ರಾತ್ರಿ 8:30 ರಿಂದ 11:30 ರ ವರೆಗೆ ರಕ್ತದ ಕಲೆಗಳು ಬಿದ್ದ ಜಾಗಗಳಲ್ಲಿ ಕೆಮಿಕಲ್ ಮೂಲಕ ಗುರುತಿಸುವ ‘ಲೂಮಿನಿಯನ್ ಟೆಸ್ಟ್’ ಮಾಡಿದ್ದಾರೆ.
ಬಾಲಕ ಸುಮಂತ್ ಮೃತದೇಹ ಪತ್ತೆಯಾದ ಬೆನ್ನಲ್ಲೇ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಾಲಕನ ಸಾವು ಹಲವು ಸಂಶಯಗಳಿಗೆ ಕಾರಣವಾಗಿದೆ. ಮೃತದೇಹ ಪತ್ತೆಯಾದ ತೋಟದ ಕೆರೆಯ ಪ್ರದೇಶದ ಸುತ್ತಮುತ್ತ ಸಾಕ್ಷ್ಯಾಧಾರಕ್ಕಾಗಿ ಬೆಳಗ್ಗೆ 7 ಗಂಟೆಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪೊಲೀಸರ ಒಂದು ತಂಡ ಜ.15 ರಂದು ಬೆಳಗ್ಗೆ ಕೆರೆಯ ನೀರನ್ನು ಪಂಪ್ ಬಳಸಿ ಹಿಂಗಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಬಾಲಕ ಸುಮಂತ್ ಮೃತದೇಹ ಮನೆಗೆ ತಲುಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದಲ್ಲಿ ವೇಣೂರು, ಬೆಳ್ತಂಗಡಿ,ಪುಂಜಾಲಕಟ್ಟೆ,ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ







