
ಬೆಳ್ತಂಗಡಿ, ಡಿಸೆಂಬರ್ 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅಡಿಯಲ್ಲಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ ವಿಪತ್ತು ನಿರ್ವಹಣಾ ಸಮಿತಿಯ ವಾರ್ಷಿಕ ವಿಶೇಷ ಸಭೆ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ಎಸ್. ಎಸ್ ರವರು ಕಾರ್ಯಕ್ರಮ ಉದ್ಘಾಟನೆ ನಡೆಸಿದರು.
ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ಧರ್ಮಸ್ಥಳ ದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಕಾರ್ಯಕ್ರಮವಾಗಿದೆ. ರಾಜ್ಯದ 91 ತಾಲ್ಲೂಕಿನಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಲಾಗಿದ್ದು 10,300 ಸ್ವಯಂಸೇವಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ನಮಗೆ ಸೇವೆ ಮತ್ತು ಸೇನೆ ಎಂದರೆ ನೆನಪಾಗುವುದು ವಾನರ ಸೇನೆ. ಒಂದು ಆದರ್ಶವನ್ನು ಒಪ್ಪಿಕೊಂಡು, ನಿಸ್ವಾರ್ಥ ಸೇವೆಯನ್ನು, ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ವಾನರ ಸೇವೆ ಕೆಲಸ ಮಾಡಿತ್ತು ಎಂದು ನಮಗೆ ಪುರಾಣಗಳು ಹೇಳುತ್ತವೆ. ವಾನರ ಸೇನೆಯಂತೆ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಮಾಜದ ಒಳಿತಿಗಾಗಿ, ಜನರ ಕಷ್ಟದಲ್ಲಿ ನೆರವಾಗುವ ಉದ್ದೇಶ ಹೊಂದಿದ್ದು ನಿಸ್ವಾರ್ಥದಿಂದ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದರು.

ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯ್ಸ್ ರವರು ಮಾತನಾಡಿ ಶೌರ್ಯ ತಂಡದ ಸದಸ್ಯರು ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆಯ ಜೊತೆಗೆ ಅನೇಕ ಕಾರ್ಯಾಚರಣೆ ಗಳಲ್ಲಿ ಪಾಲ್ಗೊಂಡು ಶ್ಲಾಘನೆಗೆ ಪಾತ್ರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ ವಿಪತ್ತು ನಿರ್ವಹಣಾ ಸಮಿತಿಯ 300 ಸ್ವಯಂಸೇವಕರಿಗೆ ಬ್ಯಾಗ್ ವಿತರಣೆ ಮಾಡಲಾಯಿತು.
ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಿಗೆ ಪ್ರಾಕೃತಿಕ ದುರಂತಗಳ ನಿರ್ವಹಣೆ ಎನ್ನುವ ಪುಸ್ತಕ ವಿತರಣೆ ಮಾಡಲಾಯಿತು.
ಶೌರ್ಯ ಸಮಿತಿಗೆ ಮಾಸ್ಟರ್ ಮತ್ತು ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಇದೇ ಸಮಯದಲ್ಲಿ ನಡೆಸಲಾಯಿತು. ಬೆಳ್ತಂಗಡಿ ಸಮಿತಿಗೆ ಮಾಸ್ಟರ್ ಆಗಿ ಅವಿನಾಶ್ ಅರಶಿನಮಕ್ಕಿ ಹಾಗೂ ಕ್ಯಾಪ್ಟನ್ ಆಗಿ ರವೀಂದ್ರ ಉಜಿರೆ ಇವರು ಮತ್ತು ಗುರುವಾಯನಕೆರೆ ಸಮಿತಿಯ ಮಾಸ್ಟರ್ ಆಗಿ ಸತೀಶ್ ಆಚಾರ್ಯ, ಕ್ಯಾಪ್ಟನ್ ಆಗಿ ವಿಶ್ವನಾಥ ಇವರು ಸರ್ವಾನುಮತದಿಂದ ಆಯ್ಕೆಯಾದರು.

ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ, ಕಿಶೋರ್ ಕುಮಾರ್, ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಯಶೋಧರ, ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ್, ಜನಜಾಗೃತಿ ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಮೇಲ್ವಿಚಾರಕ ನಿತೇಶ್ ಉಪಸ್ಥಿತರಿದ್ದರು.
ಬೆಳ್ತಂಗಡಿ ಹಾಗೂ ಗುರುವಾಯನಕೆರೆ ವಿಪತ್ತು ನಿರ್ವಹಣಾ ಸಮಿತಿಯ ಸಂಯೋಜಕರು, ಘಟಕ ಪ್ರತಿನಿಧಿಗಳು, ಹಾಗೂ 350 ಮಂದಿ ಸ್ವಯಂಸೇವಕರು ಉಪಸ್ಥಿತರಿದ್ದರು.




