
ಮಂಗಳೂರು : ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು MDMA ಸಾಗಿಸುತ್ತಿದ್ದ ರೌಡಿಶೀಟರ್ ಒಬ್ಬನನ್ನು ಮೂಡಬಿದಿರೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ಗೆ ಶಿರ್ತಾಡಿ ಕಡೆಯಿಂದ ಬಂಟ್ವಾಳ ಕಡೆಗೆ ಅಕ್ರಮವಾಗಿ ಮಾದಕ ವಸ್ತು ಡ್ರಗ್ಸ್ ಸಾಗಾಟ ಮಾಡುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿ.16 ರಂದು ಸಂಜೆ 5:30 ಕ್ಕೆ ಮೂಡಬಿದಿರೆ ಪ್ರಾಂತ್ಯ ಗ್ರಾಮದ ಕೊಡಂಗಲ್ಲು ರಸ್ತೆಯಲ್ಲಿ KA-09-MJ-7034 ನಂಬರಿನ ಹುಂಡೈಯಿ ಐ20 ಕಾರನ್ನು ಪೊಲೀಸರ ತಂಡ ಅಡ್ಡಹಾಕಿ ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಾಗ ಕಾರನ್ನು ಬಿಟ್ಟು ಆರೋಪಿ ಚಾಲಕ ಪರಾರಿಯಾಗುವ ಪ್ರಯತ್ನ ನಡೆಸಿದ್ದಾನರ ಈ ವೇಳೆ ತಕ್ಷಣ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ಮತ್ತು ಸಿಬ್ಬಂದಿ ಕಾರನ್ನು ಸುತ್ತುವರಿದು ಕಾರಿನ ಚಾಲಕನನ್ನು ಹಿಡಿದು ಕಾರನ್ನು ಪರಿಶೀಲನೆ ಮಾಡಿದಾಗ ಕಾರಿನಲ್ಲಿ 50 ಸಾವಿರ ಮೌಲ್ಯದ 11 ಗ್ರಾಂ ಎಮ್.ಡಿ.ಎಂ.ಎ ಡ್ರಗ್ಸ್ ಮತ್ತು ತಲವಾರು ಪತ್ತೆಯಾಗಿದೆ.
ಆರೋಪಿ ಕಾರಿನ ಚಾಲಕನನ್ನು ವಿಚಾರಣೆ ನಡೆಸಿದಾಗ MDMA ಮಾದಕ ವಸ್ತುವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಕಲ್ಲಡ್ಕ ನಿವಾಸಿ ಕಲ್ಲಡ್ಕ ತೌಸೀಫ್ @ ಪಪ್ಪಿ (30) ಎಂಬುದಾಗಿ ತಿಳಿದು ಬಂದಿದ್ದು ಈತನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಐದು ಪ್ರಕರಣಗಳು ದಾಖಲಾಗಿದೆ.
ಒಂದು ಹುಂಡೈಯ್ i20 ಕಾರು, ಒಂದು ತಲವಾರ್, ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮೂಡಬಿದಿರೆ ಪೊಲೀಸರು ಆರೋಪಿ ಕಲ್ಲಡ್ಕ ತೌಸೀಫ್ @ ಪಪ್ಪಿ ಯನ್ನು ಬಂಧಿಸಿ ಆತನ ವಿರುದ್ಧ
ಮಾದಕ ವಸ್ತು ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಡಿ.16 ರಂದು ರಾತ್ರಿ ಪ್ರಕರಣ ದಾಖಲಾಗಿದೆ.
ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ಹಾಗೂ ಸಿಬ್ಬಂದಿ ಅಖಿಲ್ ಅಹಮ್ಮದ್, ಮಹಮ್ಮದ್ ಉಸೇನ್, ನಾಗರಾಜ್, ಮಹಮ್ಮದ್ ಇಕ್ಬಾಲ್, ದೇವರಾಜ್, ಚಂದ್ರಹಾಸ ರೈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.




