Home ಸ್ಥಳೀಯ ಸಮಾಚಾರ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಕೋಟಿ-ಚೆನ್ನಯ ಕ್ರೀಡಾಕೂಟ ಉದ್ಘಾಟನೆ

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಕೋಟಿ-ಚೆನ್ನಯ ಕ್ರೀಡಾಕೂಟ ಉದ್ಘಾಟನೆ

1
0

ಬೆಳ್ತಂಗಡಿ : ‘ಶಿವಗಿರಿಯ ಶಾಖಾ ಮಠಕ್ಕೆ ರಾಜ್ಯದಲ್ಲಿ 5 ಎಕರೆ ಸ್ಥಳ ಗುರುತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರು ತಿಳಿಸಿದ್ದು ಆ ಮಠ ಬೆಳ್ತಂಗಡಿ ತಾಲ್ಲೂಕಿನಲ್ಲಿ ಆಗುವಂತಾಗಬೇಕು. ತಾಲ್ಲೂಕಿನ ಪ್ರಮುಖ ವೃತ್ತದಲ್ಲಿ ಬಿಲ್ಲವ ಸಮಾಜದ ಶಕ್ತಿಯಾಗಿದ್ದ ಕೀರ್ತಿಶೇಷ ಕೆ. ವಸಂತ ಬಂಗೇರರ ಪುತ್ಥಳಿ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.

ಅವರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ, ಯುವ ಬಿಲ್ಲವ ವೇದಿಕೆ ಮತ್ತು ಬಿಲ್ಲವ ಮಹಿಳಾ ವೇದಿಕೆ ಸಹಕಾರದೊಂದಿಗೆ ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನದ ದಿ.ಕೆ.ವಸಂತ ಬಂಗೇರ ಸಭಾ ವೇದಿಕೆಯಲ್ಲಿ ನಡೆದ
12ನೇ ವರ್ಷದ ಕೋಟಿ-ಚೆನ್ನಯ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ ಮಾತನಾಡಿ, ‘ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಕಾಪಾಡಲು ಕ್ರೀಡೆ ಅಗತ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ
ಮಕ್ಕಳಿಗೆ ಕ್ರೀಡೆಯ ಮೇಲೆ ಆಸಕ್ತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಕ್ರೀಡಾ ಮನೋಭಾವ ಹಾಗೂ ಸಂಘಟನಾ ಶಕ್ತಿ ಬೆಳೆಸುವ ನೆಲೆಯಿಂದ ಜಾಗತಿಕ ಬಿಲ್ಲವರ ಕ್ರೀಡಾಕೂಟ ಜ.16 ರಂದು ಮಂಗಳೂರಿನಲಿ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಶಕ್ತಿಯನ್ನು ತೋರಿಸಬೇಕಾಗಿದೆ’ ಎಂದು ಕರೆ ನೀಡಿದರು

ಬಿಜೆಪಿ ಮುಖಂಡ ಜಯಂತ ಕೋಟ್ಯಾನ್ ಮಾತನಾಡಿ, ‘ಕ್ರೀಡಾಕೂಟ ಸಮಾನತೆ ಸಂದೇಶ ಕೊಡುವಂತಹುದು. ಬಿಲ್ಲವ ಸಂಘದ ಮೂಲಕ ಅನೇಕ ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿದ್ದು ಅರ್ಹವಾಗಿಯೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ‘ ಎಂದರು.

ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕ್ರೀಡಾ ಜ್ಯೋತಿಯನ್ನು ಬಿಲ್ಲವ ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ ಬಂಗೇರ ಹಸ್ತಾಂತರ ಮಾಡಿದರು. ಕ್ರೀಡಾ ವಾಹನ ಜಾಥಾಕ್ಕೆ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಚಾಲನೆ ನೀಡಿದರು. ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಧ್ವಜಾರೋಹಣ ನೆರವೇರಿಸಿದರು.

ವೇದಿಕೆಯಲ್ಲಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ., ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ, ಎನ್.ಇ.ಇ.ಟಿ. ನರ್ಸಿಂಗ್ ಕಾಲೇಜು ಗುರುವಾಯನಕೆರೆ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಸಜಿ ಆರ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಕ್ಷಗಾನ ಮಂಡಳಿ ತಾಲ್ಲೂಕು ಸಂಚಾಲಕ ನಿತ್ಯಾನಂದ ನಾವರ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಬಂಟ್ವಾಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗಿಶ್ ಕುಮಾರ್ ನಡಕ್ಕರ, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಕೋಶಾಧಿಕಾರಿ ಪ್ರಶಾಂತ್ ಮಚ್ಚಿನ, ಸಂಘದ ಮಾಜಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಕ್ರೀಡಾ ನಿರ್ದೇಶಕ ತನುಷ್ ಜೆ ಹೆರಾಜೆ, ಯುವ ಬಿಲ್ಲವ ವೇದಿಕೆ ಕ್ರೀಡಾ ಕಾರ್ಯದರ್ಶಿ ದೇವಿಪ್ರಸಾದ್ ಬರಮೇಲು, ಸದಾನಂದ ಪೂಜಾರಿ ಉಂಗಿಲ ಬೈಲು, ಶಿರ್ಲಾಲು ಸಿ. ಎ. ಬ್ಯಾಂಕ್ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ರೂಪೇಶ್ ಕೆ ಧರ್ಮಸ್ಥಳ ಸೇರಿದಂತೆ ಸಂಘದ ನಿರ್ದೇಶಕರು ಇದ್ದರು.

ವಿಶ್ವಕಪ್ ವಿಜೇತ ಕಬಡ್ಡಿ ತಂಡದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ನೇತೃತ್ವದಲ್ಲಿ ಕ್ರೀಡಾಜ್ಯೋತಿಯು ಕ್ರೀಡಾಂಗಣಕ್ಕೆ ಸಾಗಿ ಬಂತು. ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾಜದ 6 ಜೋಡಿ ಅವಳಿಗಳನ್ನು ಗೌರವಿಸಲಾಯಿತು.

ಮಹಿಳಾ ಬಿಲ್ಲವ ವೇದಿಕೆಯ ಸದಸ್ಯೆ ವಿಜಯ ಹರಿದಾಸ್ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್ ಕುಕ್ಕೇಡಿ ಸ್ವಾಗತಿಸಿದರು. ಸತೀಶ್ ಹೊಸ್ಮಾರ್ ನಿರೂಪಿಸಿದರು.ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರಸಾದ್ ಎಂ.ಕೆ. ವಂದಿಸಿದರು.

LEAVE A REPLY

Please enter your comment!
Please enter your name here