ಬೆಳ್ತಂಗಡಿ; ಕಸಾಯಿಖಾನೆಗೆ ಸಗಾಟ ಮಾಡುವವರಿಗೆ ದನ ಮಾರಾಟ ಮಾಡಿದ ಆರೋಪದ ಮೇಲೆ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೊಹರಾ ಎಂಬವರ ಮನೆಯನ್ನು ಧರ್ಮಸ್ಥಳ ಪೊಲೀಸರು ಜಪ್ತಿ ಮಾಡಿದ್ದು ಈ ಮನೆಯನ್ನು ಬಿಡುಗಡೆ ಮಾಡಿ ಪುತ್ತೂರು ಸಹಾಯಕ ಕಮಿಷನರ್ ಆದೇಶ ನೀಡಿರುವುದಾಗಿ
ಬೆಳ್ತಂಗಡಿ ತಾಲೂಕು ಸಿಪಿಐಎಂ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ ಭಟ್ ಅವರು ಮಾಹಿತಿ ನೀಡಿದ್ದಾರೆ.
ಪುತ್ತೂರು ಎಸಿ ನ್ಯಾಯಾಲಯದಲ್ಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಬಿ.ಎಂ ಭಟ್ ಮನವಿ ಸಲ್ಲಿಸಿದ್ದರು ಪ್ರಕರಣವನ್ನು ಪರಿಶೀಲಿಸಿದ ಪುತ್ತೂರು ಸಹಾಯಕ ಕಮಿಷನರ್ ಅವರು ಪೊಲೀಸರು ಮುಟ್ಟುಗೋಲು ಹಾಕಿದ್ದ ಮನೆಯನ್ನು ಬಿಡುಗಡೆ ಮಾಡಿ ಆದೇಶ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನಲೆ;
ನ.4 ರಂದು ಅಕ್ರಮವಾಗಿ ದನಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಧರ್ಮಸ್ಥಳ ಪೊಲೋಸರು ಪತ್ತೆ ಹಚ್ಚಿದ್ದರು. ಪ್ರಕರಣದಲ್ಲಿ ದನ ಸಾಗಾಟಗಾರರ ವಿರುದ್ದ ಪ್ರಕರಣ ದಾಖಲಿಸಿದ ಪೊಲೀಸರು ಇವರಿಗೆ ದನ ಮಾರಾಟ ಮಾಡಿದ್ದ ಪಟ್ಟೂರು ನಿವಾಸಿ ಜೊಹರಾ ಎಂಬವರ ವಿರುದ್ದವೂ ಪ್ರಕರಣ ದಾಖಲಿಸಿದ್ದರು
ಇದೇ ಪ್ರಕರಣಕ್ಕೆ ಸಂಬಂಧೀಸಿದಂತೆ ಕಾನೂನು ಕ್ರಮ ಮುಂದುವರಿಸಿದ ಧರ್ಮಸ್ಥಳ ಪೊಲೀಸರು ಆರಂಭದಲ್ಲಿ ದನ ಸಾಗಾಟ ಮಾಡಿದ ವ್ಯಕ್ತಿಯ ಮನೆಯಲ್ಲಿಯೇ ಕಸಾಯಿಖಾನೆ ನಡೆಯುತ್ತಿದೆ ಎಂದು ಅವರ ಮನೆಯನ್ನು ಜಪ್ತಿ ಮಾಡಿದ್ದರು.
ಮುಂದುವರಿದ ಪೊಲೀಸರು ನ 6 ರಂದು ಜೊಹರ ಅವರ ಮನೆಗೆ ತೆರಳಿ ಅವರ ತಾಯಿ ಸಾರಮ್ಮ ಅವರಿಗೆ ನೋಟೀಸ್ ನೀಡಿ ಯಾವುದೇ ಸ್ಪಷ್ಟೀಕರಣ ನೀಡಲು ಅವಕಾಶವೂ ನೀಡದೆ ಅಂದೇ ಅವರ ಮನೆಯನ್ನು ಮುಟ್ಟುಗೋಲು ಹಾಕಿದ್ದರು. ಮನೆಯಲ್ಲಿದ್ದ ಮಕ್ಕಳು ಸೇರಿ ಎಲ್ಲರನ್ನೂ ಹೊರ ಹಾಕಲಾಗಿತ್ತು. ಈ ಮನೆಯಲ್ಲಿ ವಾಸಿಸುತ್ತಿದ್ದ ಶಾಲೆಗ ಹೋಗುವ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂವರು ಮಕ್ಕಳು ಹಾಗೂ ಇಡೀ ಕುಟುಂಬ ಇದರಿಂದಾಗಿ ಬೀದಿಗೆ ಬಿದ್ದಂತಾಗಿತ್ತು.
ಈ ಬಗ್ಗೆ ಶುಕ್ರವಾರ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ ನೀಡಿದ ಬಿ.ಎಂ ಭಟ್ ಅವರು ಕಾನೂನು ಬಾಹಿರವಾಗಿ ಮನೆಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಮನೆಯನ್ನು ತೆರವು ಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಇದಾದ ಬಳಿಕ ಈ ಬಗ್ಗೆ ಪುತ್ತೂರು ಸಹಾಯಕ ಕಮಿಷನರ್ ಮುಂದೆ ನ್ಯಾಯವಾದಿ ಬಿ.ಎಂ ಭಟ್ ಅವರು ಈ ಬಗ್ಗೆ ಮನವಿ ಸಲ್ಲಿಸಿದ್ದು ಪ್ರಕರಣದ ಪರಿಶೀಲನೆ ನಡೆಸಿದ ಪುತ್ತೂರು ಸಹಾಯಕ ಕಮಿಷನರ್ ಅವರು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿದ್ದ ಮನೆಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.
ಜೊಹರ ಅವರ ಕುಟುಂಬ ಹಾಲು ಉತ್ಪಾದಕರಾಗಿದ್ದು ದನಗಳನ್ನು ಸಾಕಿ ಹಾಲು ಮಾರುವ ಕಾರ್ಯ ಮಾಡುತ್ತಿದ್ದಾರೆ. ಇವರು ತಮ್ಮ ಬಳಿ ಇದ್ದ ಒಂದು ದನ ಹಾಗೂ ಎರಡು ಕರುಗಳನ್ನು ಮಾರಾಟ ಮಾಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.










