ಬೆಳ್ತಂಗಡಿ:ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಮುಂಭಾಗ ಹರಿಯುವ ನೇತ್ರಾವತಿ ನದಿಯ ಪರಿಸರದಲ್ಲಿ ಭಾನುವಾರ ಮೊಸಳೆ ಕಂಡು ಬಂದಿದೆ.
ದೇವಸ್ಥಾನದ ಸಮೀಪ ಮೃತ್ಯುಂಜಯ ಹಾಗೂ ನೇತ್ರಾವತಿ ನದಿ ಸಂಗಮಗೊಳ್ಳುತ್ತದೆ. ನದಿಯಲ್ಲಿ ಬೆಳಗಿನ 10ಗಂಟೆ ಸಮಯ ಮೊಸಳೆ ಈಜಾಡುತ್ತಿರುವುದು ದೇವಸ್ಥಾನದಲ್ಲಿ ಇದ್ದವರಿಗೆ ಕಂಡು ಬಂದಿದೆ. ಬಳಿಕ ಮೊಸಳೆ ನದಿಯ ಇನ್ನೊಂದು ಭಾಗದಲ್ಲಿ ಮರಳಿನ ಮೇಲೆ ವಿಶ್ರಮಿಸುತ್ತಿತ್ತು. ಬಳಿಕ ಮತ್ತೆ ನದಿಗೆ ಇಳಿದ ಮೊಸಳೆ ಸ್ವಲ್ಪ ಸಮಯದ ನಂತರ ಅದೇ ಸ್ಥಳದಲ್ಲಿ ಕಂಡುಬಂತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸುಮಾರು ಒಂದು ತಾಸಿನಷ್ಟು ಸಮಯ ಅಲ್ಲೇ ಇದ್ದ ಮೊಸಳೆ ಮತ್ತೆ ನದಿಗೆ ಇಳಿದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊಸಳೆ ಕಂಡುಬಂದ ಸ್ಥಳಕ್ಕೆ ಹೋಗಲು ಹೆಚ್ಚಿನ ನೀರ ಹರಿವು ಹಾಗೂ ಸ್ಥಳದಲ್ಲಿ ಹೂಳು ತುಂಬಿರುವುದು ಅಡ್ಡಿಯಾಗಿದ್ದು ಮೊಸಳೆ ಇಲ್ಲಿಂದ ಯಾವ ಪ್ರದೇಶಕ್ಕೆ ಹೋಗಿದೆ ಎಂಬುದು ತಿಳಿದು ಬಂದಿಲ್ಲ.
ಕಳೆದ ಮೂರು-ನಾಲ್ಕು ದಿನಗಳಿಂದ ನೇತ್ರಾವತಿ, ಮೃತ್ಯುಂಜಯ ನದಿ ಪ್ರದೇಶದ ಅಲ್ಲಲ್ಲಿ ಮೊಸಳೆ ಕಂಡು ಬಂದಿರುವ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.
ಮುಂಡಾಜೆ ಕಲ್ಮಂಜ ಪರಿಸರದಲ್ಲಿ ನದಿಗಿಳಿಯುವವರು ಎಚ್ಚರಿಕೆ ವಹಿಸಬೇಕಾಗಿದೆ.
