Home ಸ್ಥಳೀಯ ಸಮಾಚಾರ ಎಸ್.ಐ.ಟಿ ರಚಿಸಿ ಸರಕಾರ ಸತ್ಯ ಹೊರ ಬರುವಂತೆ ಮಾಡಿದೆ; ದ್ವೇಷ ಯಾಕೆಂದು ಗೊತ್ತಾಗುತ್ತಿಲ್ಲ ಡಾ.ಡಿ ವೀರೇಂದ್ರ...

ಎಸ್.ಐ.ಟಿ ರಚಿಸಿ ಸರಕಾರ ಸತ್ಯ ಹೊರ ಬರುವಂತೆ ಮಾಡಿದೆ; ದ್ವೇಷ ಯಾಕೆಂದು ಗೊತ್ತಾಗುತ್ತಿಲ್ಲ ಡಾ.ಡಿ ವೀರೇಂದ್ರ ಹೆಗ್ಗಡೆಯವರು

32
0

ಬೆಳ್ತಂಗಡಿ: ರಾಜ್ಯ ಸರಕಾರ ಎಸ್‌ಐಟಿ ರಚನೆ ಮಾಡಿದ ಕಾರಣ ಸತ್ಯ ಹೊರ ಬರುತ್ತಿದೆ ಈ ಕಾರಣಕ್ಕೆ
ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ‌ವೀರೇಂದ್ರ ಹೆಗ್ಗಡೆ ಹೇಳಿದರು.
ಶುಕ್ರವಾರ (ಸೆ.26) ಧರ್ಮಸ್ಥಳ ಗ್ರಾಮದ ಭಕ್ತರಿಂದ ನಡೆದ ವಿಶೇಷ ಪೂಜೆಯ ಬಳಿಕ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶತ್ರುತ್ವ ಯಾಕೆ ಬಂತು ಎಂದು ನಮಗೆ ಗೊತ್ತಿಲ್ಲ. ಇಷ್ಟು ಹಗೆತನ, ಅಪವಾದ ಯಾಕೆ ಬಂತೆಂದು ಗೊತ್ತಿಲ್ಲ. ನಾವು ಸೇವೆ ಮಾಡುತ್ತೇವೆ, ಆದರೆ ಸೇವೆ ಪ್ರಚಾರದ ವಸ್ತುವಲ್ಲ. ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ ಎಂದರು.
ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವು ಎಲ್ಲರೂ ಗಮನಿಸಿದ್ದೀರಿ. ನಾವು ಇಲ್ಲಿ‌ ನಿಮಿತ್ತ ಮಾತ್ರ, ಆದರೆ ಮುಂದುವರೆಸಿಕೊಂಡು ಹೋಗಿದ್ದು ಅದಕ್ಕೆ ಸಂಬಂಧಪಟ್ಟ ಇಲಾಖೆಯವರು. ಕೆಲವರು ಪ್ರೀತಿಯಲ್ಲಿ ಟೀಕೆ ಮಾಡಿದರು, ಇವರ ಹಾಗೆ ಟೀಕೆ ಮಾಡಿಲ್ಲ ಎಂದರು.

ನಿಮಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಧರ್ಮಸ್ಥಳ ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಟುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆಯೆಂದು ನೀವು ನೋಡಿದ್ದೀರಿ. ನನ್ನ ಮೇಲೆ ಯಾಕೆ ಇಷ್ಟು ದ್ವೇಷ ಎಂದು ನನಗೆ ಗೊತ್ತಾಗಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ, ಎತ್ತರದ ಬೆಟ್ಟದಿಂದ ನೀರು ಹರಿಯಲೇ ಬೇಕು ಹರಿದಿದೆ. ನಮ್ಮ ಮೇಲೆ ದೃಢವಾದ ನಂಬಿಕೆಯಿಟ್ಟ ಎಲ್ಲರಿಗೂ ನಾನು‌ ಆಭಾರಿ. ಈಗಾಗಲೇ ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗಿದ್ದಾರೆ. ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ ಎಂದು ಹೇಳಿದ್ದಾರೆ. ಈ ಶತ್ರುತ್ವ ಯಾಕೆಂದು ಕೇಳುತ್ತಾರೆ. ನಾವು ಯಾರನ್ನೂ ಹೀಯಾಳಿಸಿಲ್ಲ, ದ್ವೇಷ ಕೂಡ ಮಾಡಿಲ್ಲ ಎಂದು ಡಾ ಹೆಗ್ಗಡೆ ಹೇಳಿದರು.
ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸವಿದೆ. ಬೆಂಗಳೂರು ಆಥವಾ ಎಲ್ಲೋ ಕೂತು ಟೀಕೆ ಮಾಡುವವರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲುವವರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಮಕ್ಕಳಿಗೂ ನಾನು ಆಭಾರಿ ಎಂದರು.
ಎಸ್ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯವಾಗಿ ಮಾತನಾಡುತ್ತಿದ್ದೇನೆ. ಸರ್ಕಾರಕ್ಕೆ ನಾನು ಆಭಾರಿ, ಎಸ್ಐಟಿ ಮಾಡಿದ ಕಾರಣ ಸತ್ಯ ಹೊರ ಬರುತ್ತಿದೆ. ನಮ್ಮ ಹೊಳಪು ಹಾಗೇ ಉಳಿದಿದೆ, ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೋಡಿಕೊಳ್ತಾರೆ. ನಾವು ಸತ್ಯದಿಂದ ಇದ್ದೇವೆ, ಹಾಗೆಯೇ ಮುಂದೆಯೂ ಇರುತ್ತೇವೆ. ಮುಂದಿನ ದಿನಗಳು ಉತ್ತಮವಾಗಿರಲಿ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಹಿತರಕ್ಷಣಾ ಸಮಿತಿಯು ಕಳೆದ ಮಾ. 27 ರಂದು ನಡೆಸಿದ ಸಮಾವೇಶದಲ್ಲಿ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರಿಗೆ ಶಿಕ್ಷೆ ಆಗಬೇಕೆಂದು ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಕ್ಷೇತ್ರದ ವಿರುದ್ಧ ನಡೆದ ಎಲ್ಲಾ ಅಪಪ್ರಚಾರಗಳು ಒಂದೊಂದಾಗಿ ಹೊರಬರುತ್ತಿತ್ತು, ಎಲ್ಲಾ ಅಪಪ್ರಚಾರಗಳಿಗೂ ಮುಕ್ತಿ ಸಿಗಬೇಕು ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು.

ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳದ ಉಗ್ರಾಣದ ಹಿರಿಯ ಮುತ್ಸದ್ಧಿ ಭುಜಬಲಿ ಉದ್ಘಾಟಿಸಿದರು.
ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಕೋಶಾಧಿಕಾರಿ ಶ್ರೀನಿವಾಸ್ ರಾವ್ ಧರ್ಮಸ್ಥಳ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಕೀಲರಾದ ಕೇಶವ ಪಿ. ಗೌಡ ,ಹರಿದಾಸ್ ಗಾಂಭೀರ, ಸುಬ್ರಮಣ್ಯ ಪ್ರಸಾದ್, ಎ.ವಿ. ಶೆಟ್ಟಿ, ಪ್ರೀತಂ ಡಿ ಪೂಜಾರಿ ಧರ್ಮಸ್ಥಳ, ಶಾಂಭವಿ ರೈ ಧರ್ಮಸ್ಥಳ, ಧನಕೀರ್ತಿ ಅರಿಗ ಧರ್ಮಸ್ಥಳ, ಅಖಿಲ್ ಶೆಟ್ಟಿ ನೇತ್ರಾವತಿ, ಪ್ರಭಾಕರ್ ಪೂಜಾರಿ ಕನ್ಯಾಡಿ ಉಪಸ್ಥಿತರಿದ್ದರು. ಗ್ರಾಮಸ್ಥರು, ಧರ್ಮಸ್ಥಳದ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here