


ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾದ ಚಿನ್ನಯ್ಯನ ಹೇಳಿಕೆ ದಾಖಲಿಸುವ ಕಾರ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಸೆ25ರಂದು ನಡೆಯಿತು. ದಿನವಿಡೀ ಆತನ ಹೇಳಿಕೆಯನ್ನು ದಾಖಲಿಸುವ ಕಾರ್ಯವನ್ನು ನ್ಯಾಯಾಧೀಶರು ನಡೆಸಿದ್ದು ಇಂದೂ ಆತನ ಹೇಳಿಕೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಸೆ.27 ರಂದು ಮತ್ತೆ ಹೇಳಿಕೆ ದಾಖಲಿಸಲು ಆತನನ್ನು ಹಾಜರು ಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಚಿನ್ನಯ್ಯನನ್ನು ಸೆ. 23 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಚ್ಚಿದ ಕೋಣೆಯಲ್ಲಿ ಹೇಳಿಕೆ ದಾಖಲಿಸುವ ಕಾರ್ಯ ಮಾಡಲಾಗಿತ್ತು. ಆಗ ಹೇಳಿಕೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಸೆ.25 ರಂದು ದಿನ ನಿಗಧಿ ಪಡಿಸಲಾಗಿತ್ತು.
ಗುರುವಾರ ಬೆಳಗ್ಗೆಯೇ ಚಿಮ್ನಯ್ಯನನ್ನು ನ್ಯಾಯಾಲಯಕ್ಕೆ ಕರೆತರಲಾಗಿದ್ದು 12.30 ರ ಸುಮಾರಿಗೆ ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಸಂಜೆ 6ಗಂಟೆಯ ವರೆಗೂ ಆತನ ಹೇಳಿಕೆ ದಾಖಲಿಸುವ ಕಾರ್ಯವನ್ನು ನ್ಯಾಯಾಧೀಶರು ನಡೆಸಿದ್ದಾರೆ. ಆದರೆ ಈತನ ಹೇಳಿಕೆ ಇನ್ನೂ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಸೆ.27ರಂದು ಮುಂದುವರಿದ ಹೇಳಿಕೆ ದಾಖಲಿಸುವ ಕಾರ್ಯ ನಡೆಯಲಿದೆ.
ಎರಡು ದಿನಗಳ ಕಾಲ ಈತ ಈಗಾಗಲೆ ಹೇಳಿಕೆ ನೀಡಿದ್ದು ಇನ್ನೂ ಇದು ಮುಗಿಯದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಾಕ್ಷಿ ದೂರುದಾರನಾಗಿ ಬಂದಾಗ ಆತ ಕೇವಲ ಎರಡು ಗಂಟೆಯ ಒಳಗೆ ತನ್ನ ಹೇಳಿಕೆ ದಾಖಲಿಸುವ ಕಾರ್ಯವನ್ನು ಮಾಡಿದ್ದ ಆದರೆ ಈಗ ಹೇಳಿಕೆ ದಾಖಲಿಸುವ ಕಾರ್ಯ ನಿರಂತರವಾಗಿ ಮುಂದುವರಿಯುತ್ತಿದೆ. ಮುಚ್ಚಿದ ಕೋಣೆಯಲ್ಲಿ ನಡೆಯುತ್ತಿರುವ ಈ ಹೇಳಿಕೆ ದಾಖಲಿಸುವ ಕಾರ್ಯದ ಬಗ್ಗೆ ಯಾವುದೇ ಮಾಹಿತಿಗಳು ಹೊರಗೆ ಬರಲು ಸಾಧ್ಯವಿಲ್ಲ.
ಸಾಕ್ಷಿ ದೂರುದಾರನಾಗಿ ಬಂದು ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಮತ್ತು ಮುಂದುವರಿದು ಎಸ್.ಐ.ಟಿ ತನಿಖೆಯೂ ನಡೆದಿತ್ತು ತನಿಖೆಯ ನಡುವೆ ಚಿನ್ನಯ್ಯ ಆರೋಪಿಯಾಗಿ ಜೈಲು ಸೇರಿದ್ದ. ಇದಾದ ಬಳಿಕ ಈತ ತಾನು ನೀಡಿದ ಹೇಳಿಕೆಗಳನ್ನು ಬದಲಿಸಿ ಎಸ್.ಐ.ಟಿ ಅಧಿಕಾರಿಗಳಿಗೆ ಬೇರೆಯೇ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಮತ್ತೆ ನ್ಯಾಯಾಲಯದ ಮುಂದೆ ಈತನ ಹೇಳಿಕೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಚಿನ್ನಯ್ಯ ಇದೀಗ ನ್ಯಾಯಾಲಯಕ್ಕೆ ನೀಡುವ ಹೇಳಿಕೆಗೂ ಮಹತ್ವವಿದ್ದು ಈ ಪ್ರಕರಣದಲ್ಲಿ ಇದನ್ನು ಅನುಸರಿಸಿ ಎಸ್.ಐ.ಟಿ ತಂಡವ ತನಿಖೆ ನಡೆಸಬೇಕಾಗಿದೆ. ಆದರೆ ಚಿನ್ನಯ್ಯ ನೀಡಿರುವ ಎರಡು ಹೇಳಿಕೆಗಳು ವಿಭಿನ್ನವಾದರೆ ಈ ಬಗ್ಗೆ ಎಸ್.ಐ.ಟಿ ಪರಿಶೀಲನೆ ನಡೆಸಲಿದ್ದು ಇದಕ್ಕೆ ಪೂರಕವಾದ ಸಾಕ್ಷ್ಯಗಳು ಲಭಿಸುತ್ತದೆಯೇ ಎಂಬ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಬೇಕಾದ ಅಗತ್ಯವಿದೆ.
ಮುಚ್ಚಿದ ಕೋಣೆಯಲ್ಲಿ ಚಿನ್ನಯ್ಯನ ಹೇಳಿಕೆ ದಾಖಲಿಸುವ ಕಾರ್ಯ ನಡೆಯುತ್ತಿದ್ದು ಆತ ಯಾವ ಹೇಳಿಕೆ ನೀಡಿದ್ದಾನೆ ಎಂಬುದರ ಬಗ್ಗೆ ಯಾವುದೇ ಮಾಹಿತಿಗಳು ಇದೀಗ ಬಹಿರಂಗಗೊಳ್ಳಲು ಸಾಧ್ಯವಿಲ್ಲ.
