


ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು ಶನಿವಾರ ನೇತ್ರಾವತಿ ಸ್ನಾನ ಘಟ್ಟದ ಸಮೀಪ ಅರಣ್ಯದಲ್ಲಿ ಸ್ಥಳ ಮಹಜರು ನಡೆಸಿದ ವೇಳೆ ಮೃತದೇಹಗಳ ಬಗ್ಗೆ ಮತ್ತಷ್ಟು ಕುರುಹುಗಳು ಲಭ್ಯವಾಗಿರುವುದಾಗಿ ತಿಳಿದು ಬಂದಿದೆ. ಇದೀಗ ನೇತ್ರಾವತಿ ಸ್ನಾನ ಘಟ್ಟದ ಸಮೀಪ ಹಾಗೂ ನೇತ್ರಾವತಿ ಸೇತುವೆಯ ಸಮೀಪ ಪೊಲೀಸ್ ಕಾವಲು ಹಾಕಲಾಗಿದ್ದು ಈ ಅರಣ್ಯ ಪ್ರದೇಶ ಸಂಪೂರ್ಣ ಪೊಲೀಸರ ನಿರೀಕ್ಷಣೆಯಲ್ಲಿದೆ. ನಾಳೆ ಇಲ್ಲಿ ಅರಣ್ಯದ ನಡುವೆ ಸ್ಥಳ ಪರಿಶೀಲನೆ ನಡೆಯುವ ಸಾಧ್ಯತೆಯಿದೆ.
ಶನಿವಾರ ಸಂಜೆಯ ವೇಳೆ ಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ವಿಠಲ ಗೌಡ ಹಾಗೂ ಇನ್ನೊಬ್ಬ ವ್ಯಕ್ತಿಯೊಂದಿಗೆ ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆ ಗುಡ್ಡೆ ಅರಣ್ಯದಲ್ಲಿ ಎಸ್.ಐ.ಟಿ ತಂಡ ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಇಲ್ಲಿಂದ ಹಲವು ವಸ್ತುಗಳನ್ನು ಶೇಖರಿಸಿ ಬಕೆಟ್ ನಲ್ಲಿ ತಂದಿರುವುದಾಗಿ ತಿಳಿದು ಬಂದಿದೆ ಇಲ್ಲಿ ವಿಠಲ ಗೌಡ ತೋರಿಸಿದ ಜಾಗದಲ್ಲಿ ಯಾವುದೋ ಅವಶೇಷಗಳು ಲಭಿಸಿದೆಯೋ ಅಥವಾ ಮಣ್ಣಿನ ಮಾದರಿಯನ್ನು ತಂದಿದ್ದಾರೆಯೋ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ.ಎಸ್.ಐ.ಟಿ ತಂಡ ಸ್ಥಳ ಪರಿಶೀಲನೆಗೆ ಬಂದಿದ್ದ ವೇಳೇ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಂಡದೊಂದಿಗೆ ಇದ್ದು ಮಾದರಿಗಳನ್ನು ಸಂಗ್ರಹಿಸಿದ್ದಾರೆ
ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯ ತಂದಿದ್ದ
ತಲೆ ಬುರುಡೆ ನೇತ್ರಾವತಿ ಸ್ನಾನಘಟ್ಟದ ಅರಣ್ಯದಿಂದಲೇ ತಂದಿದ್ದಾನೆ ಎಂಬುದು ಇದೀಗ ಸ್ಪಷ್ಟವಾಗಿದ್ದು ಇದನ್ನು ಹೇಗೆ ತೆಗೆದಿದ್ದಾರೆ ಯಾರು ತೆಗೆದಿದ್ದಾರೆ ಅದಕ್ಕೆ ಸಹಕರಿಸಿದವರು ಯಾರು ಎಂಬುದರ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಗಿರೀಶ್ ಮಟ್ಟಣ್ಣನವರ್ ಜಯಂತ್.ಟಿ ಹಾಗೂ ವಿಠಲ ಗೌಡ ಅವರು ಭಾನುವಾರವೂ ಎಸ್.ಐ.ಟಿ ಕಚೇರಿಯಲ್ಲಿದ್ದು ವಿಚಾರಣೆ ಎದುರಿಸಿದ್ದಾರೆ.
ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಮತ್ತಷ್ಟು ಕಾರ್ಯಾಚರಣೆ ಸೋಮವಾರ ನಡೆಯುವ ನಿರೀಕ್ಷೆಯಿದ್ದು ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿರುವುದಾಗಿ ತಿಳಿದು ಬಂದಿದೆ.
ಕಾರ್ಯಾಚರಣೆ ಆರಂಭವಾದಾಗ ಇಲ್ಲಿ ರಾತ್ರಿಯೀ ಪೊಲೀಸರನ್ನು ನಿಯೋಜಿಸಲಾಗಿತ್ತು ಆದರೆ ಅಗೆಯವ ಕಾರ್ಯ ಮುಗಿದ ಬಳಿಕ ಇಲ್ಲಿ ಯಾವುದೇ ರಕ್ಷಣೆ ಒದಗಿಸಲಾಗಿರಲಿಲ್ಲ ಆದರೆ ಶನಿವಾರ ಇಲ್ಲಿ ಸ್ಥಳ ಪರಿಶೀಲನೆ ಮುಗಿದ ಬಳಿಕ ಈ ಸ್ಥಳಕ್ಕೆರಕ್ಷಣೆಯನ್ನು ಒದಗಿಸಲಾಗಿದೆ.









