


ಬೆಳ್ತಂಗಡಿ; ಉಜಿರೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಆರ್.ಎಸ್.ಎಸ್ ಸಂಘಟನೆಯ ಮುಖಂಡನನ್ನು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಬ್ರಹ್ಮಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದುರುದ್ದೇಶ ಪೂರ್ವಕವಾಗಿ ಕಾನೂನು ಬಾಹಿರವಾಗಿ ಬಂಧಿಸಿರುವುದು ಖಂಡನೀಯ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.
ಮಹೇಶ್ ಶೆಟ್ಟಿ ಅವರನ್ನು ಕಾನೂನುಬಾಹಿರವಾಗಿ ಬಂದಿಸಿದ ಸರಕಾರದ ಕ್ರಮದ ವಿರುದ್ದ ಮದ್ಯ ಪ್ರವೇಶಿಸಿ ನ್ಯಾಯ ಒದಗಿಸಲು ಆಗ್ರಹಿಸಿ ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಯಾರನ್ನೂ ಯಾರೂ ಅನಾವಶ್ಯವಾಗಿ ಟೀಕಿಸಬಾರದು ಎಂಬುದು ಸರಿ ಆದರೆ ಟೀಕಿಸಿದ್ದಾರೆ ಎಂಬ ಕಾರಣಕ್ಕೆ ದುರುದ್ದೇಶದಿಂದ ಸೌಜನ್ಯ ಪರ ಹೋರಾಟಗಾರರನ್ನು ಮಾತ್ರ ಬಂದಿಸಿರುವುದು ಸರಿಯಲ್ಲ ಎಂದರು. ಸಂವಿಧಾನಾತ್ಮಕ ಹುದ್ದೆಗಳಲ್ಲಿರುವ ನಮ್ಮ ರಾಜ್ಯದ ಮುಖ್ಯಮಂತ್ರಿಯವರನ್ನು ಕೊಲೆಗಾರ ಎಂದ ಶಾಸಕರನ್ನಾಗಲಿ, ಅವರದೇ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂದಿ ಮೊದಲಾದವರ ಅವಮಾನಕರವಾಗಿ ಟೀಕಿಸಿದ ಬಿಜೆಪಿಗಳನ್ನಾಗಲಿ, ಕಮ್ಯೂನಿಸ್ಟರನ್ನು ನಿತ್ಯ ಅವಹೇಳನಕಾರಿಯಾಗಿ ನಿಂದಿಸುವವರನ್ನಾಗಲಿ, ಮುಸ್ಲಿಂರನ್ನು ದಿನಾ ಅವಮಾನಿಸುತ್ತಾ, ಸುಳ್ಳುಗಳನ್ನೇ ಮಾತಾಡುತ್ತಾ ಜನರ ದಾರಿ ತಪ್ಪಿಸುತ್ತಾ ಬದುಕುವ ಕೋಮುವಾದಿಗಳ ಬಗ್ಗೆಯಾಗಲಿ ಯಾವ ಕ್ರಮವನ್ನೂ ಕೈಗೊಳ್ಳದ ರಾಜ್ಯದ ಕಾಂಗ್ರೆಸ್ ಸರಕಾರವು ಇದೀಗ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲೂ ಇರದ ಕೇವಲ ಬಿಜೆಪಿ ಪಕ್ಷದ ಕಾರ್ಯದರ್ಶಿ ಆರ್.ಎಸ್.ಎಸ್ ನ ಸಂತೋಷ್ ಬಿ.ಎಲ್. ಅವರನ್ನು ನಿಂದಿಸಿರುವುದು ಮಾತ್ರಾ ಕ್ರಮಕೈಗೊಳ್ಳಲು ಯೋಗ್ಯ ಪ್ರಕರಣ ಎಂದು ಪರಿಗಣಿಸಿರುವುದು ಯಾಕೆ ಎಂಬುದು ಪ್ರಶ್ನೆಯಾಗಿದೆ ಇದರ ಹಿಂದಿರುವ ಷಡ್ಯಂತ್ರ ಬಹಿರಂಗ ಪಡಿಸಬೇಕು. ಇದರ ಹಿಂದೆ ಇರುವ ಕಾಣದ ಕೈಗಳು ಬಹಿರಂಗವಾಗಬೇಕು ಎಂದಂರು. ಆದರೆ ಈ ಟೀಕೆಗಿಂತ ಅಪಾಯಕಾರಿ ಪ್ರಕರಣಗಳಾದ ಕೊಲೆ, ಅತ್ಯಾಚಾರಗಳಿಗೆ, ಲೂಟಿ, ಉದ್ರೇಕಕಾರಿ ಭಾಷಣಗಳಿಗೆ ಕ್ರಮ ಕೈಗೊಳ್ಳದ ಕಾಂಗ್ರೇಸ್ ಸರಕಾರ ಸೌಜನ್ಯ ಹೋರಾಟವನ್ನು ಮಟ್ಟ ಹಾಕುವ ದುರುದ್ದೇಶದಿಂದ ಇದೀಗ ಆರ್.ಎಸ್.ಎಸ್. ನ ಏಜೆಂಟರಂತೆ ವರ್ತಿಸುವುದು ಅನುಮಾನಕ್ಕೆ ಎಡೆಮಾಡುವಂತಾಗಿದೆ ಎಂದು ಹೇಳಿದ್ದಾರೆ.
