Home ಬ್ರೇಕಿಂಗ್‌ ನ್ಯೂಸ್ ಧರ್ಮಸ್ಥಳ ವಿರುದ್ದ ಬಂದಿರುವ ಆರೋಪಗಳ ಬಗ್ಗೆ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪ್ರತಿಕ್ರಿಯೆ

ಧರ್ಮಸ್ಥಳ ವಿರುದ್ದ ಬಂದಿರುವ ಆರೋಪಗಳ ಬಗ್ಗೆ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪ್ರತಿಕ್ರಿಯೆ

59
0

ಬೆಂಗಳೂರು: ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಮೃತದೇಹಗಳು ಹೂತು ಹಾಕಿರುವ ಕುರಿತ ಆರೋಪಗಳ ಬಗ್ಗೆ ಇದೇ ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸಂಸದ ವೀರೇಂದ್ರ ಹೆಗ್ಗಡೆಯರು ಪ್ರತಿಕ್ರಿಯಿಸಿದ್ದಾರೆ. ಈ ಆರೋಪಗಳು ಆಧಾರರಹಿತ ಮತ್ತು ಸುಳ್ಳು ತನಿಖೆಯಿಂದ‌ ಎಲ್ಲ ಸತ್ಯ ಹೊರ ಬರಲಿದೆ ಎಂದು ಹೇಳಿದ್ದಾರೆ.

PTI ಸಂದರ್ಶನದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ಇದರಿಂದ ತೀವ್ರ ನೋವುಂಟಾಗಿದೆ ಎಂದು ಹೇಳಿದರು.

ಈ ಕುರಿತು ತನಿಖೆಗೆ ಕರ್ನಾಟಕ ಸರಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿರುವುದನ್ನು ಸ್ವಾಗತಿಸಿದ‌ ಡಾ ಹೆಗ್ಗಡೆಯವರು, ಎಸ್‌ಐಟಿ ರಚಿಸಿರುವುದು ಒಳ್ಳೆಯದಾಗಿದೆ. ಸತ್ಯ ಎಲ್ಲರಿಗೂ ತಿಳಿಯಲು ಆದಷ್ಟು ಬೇಗ ತನಿಖೆ ಪೂರ್ಣಗೊಳ್ಳಲಿ. ನಾವು ನಮ್ಮ ಎಲ್ಲಾ ದಾಖಲೆಗಳನ್ನು ತೆರೆದಿಟ್ಟಿದ್ದೇವೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುತ್ತಿಲ್ಲ, ಎಲ್ಲಾ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳು ಟ್ರಸ್ಟ್ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ ನಮ್ಮ ಕುಟುಂಬದ ಒಡೆತನದ ಅಸ್ತಿ ಬಹಳ ಕಡಿಮೆಯಿದೆ. ಹೆಚ್ಚಿನ ಆಸ್ತಿಯು ಟ್ರಸ್ಟ್‌ನದ್ದಾಗಿದೆ ಮತ್ತು ಅದಕ್ಕೆ ದಾಖಲೆಗಳಿವೆ. ಕಳೆದ 14 ವರ್ಷಗಳಿಂದ ಧರ್ಮಸ್ಥಳದ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿದ್ದರೂ ನಾವು ಅಚಲವಾಗಿ ನಮ್ಮ ಸಮಾಜ ಸೇವೆಯನ್ನು ಮುಂದುವರಿಸಿದ್ದೇವೆ ಎಂದು ಅವರು ಹೇಳಿದರು.

ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ವೀರೇಂದ್ರ ಹೆಗ್ಗಡೆ, ಈ ಆರೋಪಗಳು ಸುಳ್ಳಾಗಿದೆ. ಧರ್ಮಸ್ಥಳದಲ್ಲಿ ನಿಧನ ಹೊಂದಿದವರು ಮೋಕ್ಷವನ್ನು ಪಡೆಯುತ್ತಾರೆ ಎಂಬ ಜನಪ್ರಿಯ ನಂಬಿಕೆ ಇದೆ. ಯಾರೇ ಮೃತಪಟ್ಟರೂ ನಾವು ಪಂಚಾಯತ್‌ಗೆ ತಿಳಿಸಿ ಕಾನೂನಿನಂತೆಯೇ ಮುಂದಿನ ಕಾರ್ಯವನ್ನು ನಡೆಸಿದ್ದೇವೆ. ಈಗ ಪ್ರಚಾರದಲ್ಲಿರುವ ಆರೋಪಗಳು ಕಟ್ಟುಕಥೆಗಳು ಸತ್ಯಕ್ಕೆ ದೂರವಾದ ವಿಚಾರಗಳು ಎಂದು ಹೇಳಿದರು.

ಪಕ್ಷಾತೀತವಾಗಿ ರಾಜಕೀಯ ನಾಯಕರು ಧರ್ಮಸ್ಥಳಕ್ಕೆ ಬೆಂಬಲವಾಗಿ ಭೇಟಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ವೀರೇಂದ್ರ ಹೆಗ್ಗಡೆ, ಇದು ರಾಜಕೀಯ ವಿಷಯವಲ್ಲ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇಲ್ಲಿಗೆ ಬಂದಿದ್ದಾರೆ. ಕೆಲವರು ದೇವಾಲಯದ ಮಾನಹಾನಿ ಮಾಡಲು ಪ್ರಯತ್ನಿಸುತ್ತಿರುವುದರಿಂದ ಎಲ್ಲಾ ಪಕ್ಷಗಳ ಮುಖಂಡರುಗಳಿಗು ನೋವಾಗಿದೆ ಅವರು ದೇವಸ್ಥಾನದ ಪರವಾಗಿ ನಿಂತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿರುವುದನ್ನು ಹೆಗ್ಗಡೆಯವರು ಸ್ವಾಗತಿಸಿದರು. ಇದು ಪಕ್ಷಪಾತರಹಿತ ನಿಲುವು ಯಾರೇ ತಪ್ಪು ಮಾಡಿದ್ದರೂ, ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯಗಳನ್ನು ಬಿಂಬಿಸುವ ರೀತಿ ನಮಗೆ ಆಘಾತವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮವು ಪ್ರಬಲವಾಗಿದೆ ಮತ್ತು ದುರದೃಷ್ಟವಶಾತ್, ಕೆಲ ಸ್ವಾರ್ಥಿಗಳು ಯುವ ಮನಸ್ಸುಗಳನ್ನು ಕಲುಷಿತಗೊಳಿಸಲು ಅದನ್ನು ಬಳಸಿಕೊಂಡಿದ್ದಾರೆ. ನಾವು ನಮ್ಮ ಒಳ್ಳೆಯ ಕೆಲಸವನ್ನು ಎಂದಿಗೂ ಪ್ರಚಾರ ಮಾಡಿಲ್ಲ. ಆದರೆ ನಮ್ಮ ಸೇವೆ 55 ಲಕ್ಷ ಕುಟುಂಬಗಳನ್ನು ತಲುಪಿದೆ ಎಂದರು.

ಸತ್ಯವೇ ಗೆಲ್ಲುತ್ತದೆ, ಈ ಪಿತೂರಿಗಳು ಕೊನೆಗೊಳ್ಳುತ್ತವೆ ಎಂದು ಇದೇ ವೇಳೆ ವೀರೇಂದ್ರ ಹೆಗ್ಗಡೆ ವಿಶ್ವಾಸ ವ್ಯಕ್ತಪಡಿಸಿದರು. ಈ ಎಲ್ಲಾ ಆರೋಪಗಳು ಸುಳ್ಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೇ ಇದ್ದಾರೆ. ಪೂಜೆ, ಆಚರಣೆಗಳು ಮತ್ತು ಸಂಪ್ರದಾಯಗಳು ಎಂದಿನಂತೆ ನಡೆಯುತ್ತಿವೆ ಮತ್ತು ಧರ್ಮಸ್ಥಳದ ಮೇಲಿನ ನಂಬಿಕೆ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here