ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಹಲವಾರು ಮೃತದೆಹಗಳನ್ನು ಹೂತು ಹಾಕಿದ್ದೇನೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರ ಬುಧವಾರ ತಾನು ಹೂತು ಹಾಕಿದ್ದ ಮೃತದೇಹಗಳ ಬಗ್ಗೆ ಮಾಹಿತಿ ನೀಡಲು ತನ್ನ ವಕೀಲರೊಂದಿಗೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪ ಸೇತುವೆಯ ಬಳಿ ಬಂದು ಸುಮಾರು ಒಂದು ಗಂಟೆ ಕಾಲ ಕಾದು ಹಿಂತಿರುಗಿದ್ದಾನೆ
ಕಾರಿನಲ್ಲಿದ್ದ ವಕೀಲರುಗಳಾಗಲಿ ಸಾಕ್ಷಿ ದೂರುದಾರನಾಗಲಿ ಕಾರಿನಿಂದ ಇಳಿಯದೆ ಮುಚ್ಚಿದ್ದ ವಾಹನದಲ್ಲಿಯೇ ಸುಮಾರು ಒಂದು ಗಂಟೆ ಸಮಯ ಕಳೆದರು. ಮಾದ್ಯಮದವರ ಮುಂದೆ ಬರಲು ನ್ಯಾಯವಾದಿಗಳು ಸಿದ್ದರಾಗಲಿಲ್ಲ.
ಧರ್ಮಸ್ಥಳ ಠಾಣೆಯಲ್ಲಿಯೇ ಇದ್ದ ತನಿಖಾಧಿಕಾರಿ;
ಸಾಕ್ಷಿ ದೂರುದಾರ ಹಾಗೂ ವಕೀಲರು ಒಂದುಗಂಟೆಯ ಕಾಲ ಸದ್ರಿ ಸ್ಥಳದಲ್ಲಿ ಇದ್ದರೂ ಯಾವುದೆ ಪೊಲೀಸ್ ಅಧಿಕಾರಿಗಳು ಈ ಸ್ಥಳಕ್ಕೆ ಬರಲಿಲ್ಲ.
ಪ್ರಕರಣದ ತನಿಖೆಯ ಜವಾಬ್ದಾರಿ ಇರುವ ಬೆಳ್ತಂಗಡಿ ಗ್ರಾಮೀಣ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಅವರು ಧರ್ಮಸ್ಥಳ ಠಾಣೆಯಲ್ಲಿ ಬೆಳಗ್ಗಿನಿಂದಲೂ ಇದ್ದು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು.
ನೇತ್ರಾವತಿ ಸ್ನಾನಘಟ್ಟದ ವರೆಗೆ ಬಂದ ಸಾಕ್ಷಿ ದೂರುದಾರರು ಮತ್ತು ವಕೀಲರ ತಂಡ ಧರ್ಮಸ್ಥಳ ಠಾಣೆಗೆ ಭೇಟಿ ನೀಡಲಿಲ್ಲ.
ಇಂದು ಸ್ಥಳ ಮಹಜರು ಇಲ್ಲ ಎಸ್.ಪಿ ಸ್ಪಷ್ಟನೆ
ಒಟ್ಟು ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮದ್ಯಾಹ್ನದ ವೇಳೆ ಸ್ಪಷ್ಟನೆ ನೀಡಿದ್ದರು. ಜು16 ಬುಧವಾರ ಹೂತು ಹಾಕಿರುವ ಹೆಣಗಳನ್ನು ತೆಗೆಯುವ ಬಗ್ಗೆ, ಸ್ಥಳ ಮಹಜರುವಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಪ್ರಕ್ರಿಯೆಗಳು ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇದರ ಹೊರತಾಗಿಯೂ ಸಾಕ್ಷಿ ದೂರುದಾರ ಹಾಗೂ ವಕೀಲರುಗಳು ಘಟನೆ ನಡೆದಿದೆ ಎಂದು ಹೇಳಲಾಗುತ್ತಿರುವ ಪ್ರದೇಶಕ್ಕೆ ಬಂದಿದ್ದರು.
