

ಬೆಳ್ತಂಗಡಿ; “ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ತಮ್ಮ ಬದುಕನ್ನು ಸುಂದರವಾಗಿಸಲು ಹಾಗೂ ಗಟ್ಟಿಗೊಳಿಸಲು ಶಿಕ್ಷಣವು ಬಹಳ ಮುಖ್ಯವಾಗಿ ಬೇಕೇ ಬೇಕು. ಆದ್ದರಿಂದ ಪ್ರತಿಯೊಬ್ಬ ನಮ್ಮ ಸಮಾಜದ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಅತಿಹೆಚ್ಚಿನ ಗಮನವನ್ನು ನೀಡಿದರೆ ತಮ್ಮ ಬದುಕನ್ನು ಸುಂದರವಾಗಿಸಲು ಸಾಧ್ಯ. ಅಂತಹ ಮೂಲ ಉದ್ದೇಶವನ್ನು ಇಟ್ಟುಕೊಂಡು ಬೆಳ್ತಂಗಡಿಯ ಜೈನ ಮಹಿಳಾ ಸಮಾಜದವರು ಈ ಕಾರ್ಯಕ್ರಮವನ್ನು ಇಟ್ಟುಕೊಂಡಿರುವುದು ನಮ್ಮ ಬೇರೆ ಸಂಸ್ಥೆಯವರಿಗೆ ಮಾದರಿಯಾಗಿದೆ” ಎಂದು ಡಾ| ನವೀನ್ ಕುಮಾರ್ ಜೈನ್ ಹೇಳಿದರು.
ಅವರು ಬೆಳ್ತಂಗಡಿಯ ಜೈನ ಮಹಿಳಾ ಸಮಾಜ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದ ಪಿನಾಕಿ ಹಾಲಿನಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಜೈನ ಮಹಿಳಾ ಸಮಾಜದ ಸದಸ್ಯರ ಮಕ್ಕಳಿಗೆ ವಿದ್ಯಾ ಪ್ರೋತ್ಸಾಹ ಧನವನ್ನು ವಿತರಿಸಿ ಮಾತನಾಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿರುವ ಪ್ರೊ. ತ್ರಿಶಾಲ ಜೈನ್ ಇವರು ವಹಿಸಿ ಮಾತನಾಡಿ ನಾವು ನಮ್ಮ ಸಮಾಜದ ಆಸ್ತಿಯಾಗಬೇಕು ಮಾತ್ರವಲ್ಲದೆ ಯಾವತ್ತೂ ತಮ್ಮ ತಂದೆ ಹಾಗೂ ತಾಯಿ ಮತ್ತು ಗುರುಗಳನ್ನು ಮರೆಯದೆ ತಮ್ಮ ಬದುಕಿನಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಪಡೆದು ಸಮಾಜದ ರತ್ನಗಳಾಗಿ ಮಿನುಗ ಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಜೈನ ಮಹಿಳಾ ಸಮಾಜದ ಹಿರಿಯ ಸದಸ್ಯರಾದ ಮಮತಾ ಎಂ ಆರ್ ಜೈನ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಜಶ್ರೀ ಎಸ್ ಹೆಗ್ಡೆ, ಕೋಶಾಧಿಕಾರಿ ಅನುಪಮಾ ಜೈನ್ ಉಪಸ್ಥಿತರಿದ್ದರು.
ಆರಂಭದಲ್ಲಿ ಮಕ್ಕಳ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡು, ಜೈನ ಸಮಾಜದ ಕಾರ್ಯದರ್ಶಿ ರಾಜಶ್ರೀ ಎಸ್ ಹೆಗ್ಡೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರೆ,
ಉಷಾ ಧನ್ಯವಾದ ಸಲ್ಲಿಸಿದರು. ದವಳ ಕಾರ್ಯಕ್ರಮ ಸಂಯೋಜಿಸಿ. ತ್ರಿಶಾಲ ವಂದಿಸಿದರು.
