

ಬೆಳ್ತಂಗಡಿ; ಮರಳು ಮತ್ತು ಕೆಂಪು ಕಲ್ಲು ಸರಾಗವಾಗಿ ಬಳಕೆದಾರರಿಗೆ ಸಿಗುವಂತೆ ಮರಳು ನೀತಿ ರೂಪಿಸಬೇಕು ಎಂದು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ರಿ. ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಧನಂಜಯ ಗೌಡ ಹೆಳಿದರು.
ಅವರು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ರಿ. ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಈ ಬಗ್ಗೆ ತಾಲೂಕಾಡಳಿತಕ್ಕೆ ಮನವಿ ನೀಡಿದಬಳಿಕ ಈ ಹೇಳಿಕೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಬೆಳ್ತಂಗಡಿ ತಾಲೂಕಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಲ್ಲುವಂತೆ ಮಾಡಿರುವುದನ್ನು ನಮ್ಮ ಸಂಘ ಸ್ವಾಗತಿಸುತ್ತದೆ. ಅದರ ಜೊತೆ ಜೊತೆಯಲ್ಲಿ ಜಿಲ್ಲೆಯಲ್ಲಿ ಹೇರಳವಾಗಿ ಲಭ್ಯ ಇರುವ ಈ ಖನಿಜವನ್ನು ಜನರಿಗೆ ಅಧಿಕೃತವಾಗಿ ಸಿಗದಂತೆ ಮಾಡಿ ಅಕ್ರಮ ದಂಧೆಕೋರರ ಲಾಬಿಗೆ ಬಲಿಯಾಗಿ ಮರಳು ಮತ್ತು ಕೆಂಪು ಕಲ್ಲಿನ ಕೃತಕ ಅಭಾವವನ್ನು ಸೃಷ್ಟೀಸಿ ಜಿಲ್ಲಾಡಳಿತ ತನ್ನ ಜವಬ್ದಾರಿಯಿಂದ ನುಣುಚಿಕೊಳ್ಳುವುದನ್ನು ಸಿಐಟಿಯು ಸಹಿಸುವುದಿಲ್ಲ ಎಂದು ಅವರು ಹೇಳಿದರು. ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಗ್ರಾಮ ಪಂಚಾಯತು ಮೂಲಕ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿ ಜನರ ಸಮಸ್ಯೆಗಳನ್ನು ನಿವಾರಿಸಿ ಮನೆ, ಕಟ್ಟಡ ಕಟ್ಟುವವರಿಗೆ, ಗಾರೆ ಕೆಲಸಗಾರರಿಗೆ ಸಹಾಯ ಮಾಡಬೇಕು ಎಂದವರು ತಿಳಿಸಿದರು.
ಮನವಿ ನೀಡುವ ಸಂದರ್ಭ ಸಿಐಟಿಯು ಮುಖಂಡರಾದ ಬಿ.ಎಂ.ಭಟ್, ಸಲಿಮೋನ್, ರಾಮಚಂದ್ರ, ಅಭಿಷೇಕ್, ಈಶ್ವರಿ ಶಂಕರ, ಜಯಶ್ರೀ, ಅಶ್ವಿತ, ನಾರಾಯಣ ಎಂಕೆ. ಮೊದಲಾದವರು ಇದ್ದರು.
