

ಬೆಳ್ತಂಗಡಿ; ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಗುರುವಾಯನಕೆರೆಯಲ್ಲಿ ಬುಧವಾರ ಮಧ್ಯಾಹ್ನ ಸುಮಾರು ಎರಡು ತಾಸಿಗಿಂತ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಿದರು.
ಅಕ್ಷಯ ತೃತೀಯದ ಖರೀದಿ, ಅಲ್ಲಲ್ಲಿ ಮದುವೆ ಇನ್ನಿತರ ಶುಭ ಕಾರ್ಯಗಳು, ರಸ್ತೆ ಬದಿ ಇರುವ ಸಭಾ ಭವನಗಳಲ್ಲಿ ಕಾರ್ಯಕ್ರಮಗಳು, ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್, ರಜಾ ದಿನವಾದ ಕಾರಣ ಹೆಚ್ಚಿನ ಪ್ರವಾಸಿ ವಾಹನಗಳ ಓಡಾಟ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಇತ್ಯಾದಿ ಟ್ರಾಫಿಕ್ ಜಾಮ್ ಗೆ ಕಾರಣವಾಯಿತು.
ಇಗುರುವಾಯನಕೆರೆಯಿಂದ ಮದ್ದಡ್ಕದವರೆಗೆ, ಗುರುವಾಯನ ಕೆರೆಯಿಂದ ಬೆಳ್ತಂಗಡಿಯ ಹಳೆಕೋಟೆ ತನಕ ಹಾಗೂ ಕಾರ್ಕಳ ರಸ್ತೆಯ ಒಟ್ಟು ಸುಮಾರು 5 ಕಿಮೀ. ವ್ಯಾಪ್ತಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತವು.ಈ ಸಮಯ ಬಿಸಿಲಿನ ವಾತಾವರಣ ವಾಹನ ಸವಾರರನ್ನು ಹೈರಾಣಗಿಸಿತು. ಸ್ಥಳೀಯರು, ವಾಹನ ಸವಾರರು,ಪೊಲೀಸರು ಕಾರ್ಯಾಚರಣೆ ನಡೆಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.ಮಧ್ಯಾಹ್ನ 12:30ರ ಸುಮಾರಿಗೆ ಆರಂಭವಾದ ಟ್ರಾಫಿಕ್ ಜಾಮ್ 3 ಗಂಟೆವರೆಗೂ ಮುಂದುವರಿಯಿತು.
