ಬೆಳ್ತಂಗಡಿ: ಸರಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ ಹಾಗೂ ದಂಡ ಪ್ರಕಟವಾಗಿದೆ.
ದಿನಾಂಕ: 20-12-2022 ರಂದು ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ವಿಜಯ್ ಎಂಬವರು ತನ್ನ ಬೈಕ್ ನಲ್ಲಿ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಕಕ್ಕೇನಾ ಎಂಬಲ್ಲಿ ಎದುರಿನಿಂದ ಬಂದ ಕೆಎಸ್ ಆರ್ಟಿಸಿ ಬಸ್ ಡಿಕ್ಕಿಯಾಗಿ ವಿಜಯ್ ಅವರಿಗೆ ಗಂಭೀರ ಗಾಯವಾಗಿತ್ತು. ವಿಜಯ್ ಅವರ ತಲೆಗೆ, ಮುಖಕ್ಕೆ, ತೀವ್ರ ಗಾಯವಾಗಿದ್ದರಿಂದ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗಲೇ ದಾರಿ ಮಧ್ಯೆ ಮೃತಪಟ್ಟಿದ್ದರು. ಸಹಸವಾರ ಶೈಲೇಶ್ ಅವರ ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿದ್ದು ಉಜಿರೆ ಎಸ್‌ಡಿಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದರು. ಈ ಬಗ್ಗೆ ಶೈಲೇಶ್ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಆರೋಪಿ ಬಸ್ ಚಾಲಕ ಧಾರವಾಡದ ಅಶೋಕ ಭೋಸಲೆ (59) ಅವರಿಗೆ ಶಿಕ್ಷೆ ಪ್ರಕಟವಾಗಿದೆ.
ಪ್ರಕರಣದಲ್ಲಿ ವಿಚಾರಣೆ ನಡೆಸಿದ ಬೆಳ್ತಂಗಡಿ ಪ್ರಿನ್ಸಿಪಲ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸಂದೇಶ ಕೆ ರವರು ಪ್ರಕರಣದಲ್ಲಿ ಬಸ್ ಚಾಲಕ ಅಶೋಕ್ ಅವರ ಮೇಲಿನ ಆರೋಪ ಸಾಬೀತಾಗಿರುವುದರಿಂದ ದಿನಾಂಕ: 23.12.2024 ರಂದು ಅವರಿಗೆ ಕಲಂ: 279 ಐ ಪಿ ಸಿ ಅಡಿಯಲ್ಲಿ 1 ತಿಂಗಳು ಸಾದಾ ಕಾರಾಗೃಹ ವಾಸ ಮತ್ತು 1000/- ರೂ ದಂಡ ತಪ್ಪಿದಲ್ಲಿ 1 ತಿಂಗಳು ಕಾರಾವಾಸ, 337 ಐಪಿಸಿ ಅಡಿಯಲ್ಲಿ1 ತಿಂಗಳು ಸಾದಾ ಕಾರಾಗೃಹ ವಾಸ ಮತ್ತು 500/- ರೂ ದಂಡ ತಪ್ಪಿದಲ್ಲಿ 15 ದಿನಗಳ ಕಾರಾವಾಸ ಕಲಂ: 304(ಎ) ಐಪಿಸಿ ರಲ್ಲಿ 2 ವರ್ಷ ಕಠಿಣ ಕಾರಾಗೃಹ ವಾಸ ಮತ್ತು 1000/- ರೂ ದಂಡ ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳ ಕಾಲ ಕಾರಾವಾಸ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ ಮೇಲಾಧಿಕಾರಿಯವರ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಶಿವಕುಮಾರ ಬಿ ರವರು ತನಿಖೆಯನ್ನು ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದು, ಸರಕಾರದ ಪರವಾಗಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಆಶಿತಾ ಎಮ್ ಎ ರವರು ನ್ಯಾಯಾಲಯದಲ್ಲಿ ವಾದಿಸಿರುತ್ತಾರೆ. ಪ್ರಕರಣದಲ್ಲಿ ತನಿಖಾಧಿಕಾರಿಯವರ ಸಹಾಯಕರಾಗಿ ಹೆಡ್ ಕಾನ್ಸ್‌ಟೇಬಲ್ ವಿಜಯಕುಮಾರ್ ರೈ ರವರು ಕಾರ್ಯನಿರ್ವಹಿಸಿರುತ್ತಾರೆ. ಬೆಳ್ತಂಗಡಿ ಸಂಚಾರ ಠಾಣಾ ಪಿ ಎಸ್ ಐ ಓಡಿಯಪ್ಪಗೌಡ, ನ್ಯಾಯಾಲಯ ಕರ್ತವ್ಯದ ಪೊಲೀಸ್ ಸಿಬ್ಬಂದಿ ನಿಕೋಲಸ್ ಪಿಂಟೋ ಮತ್ತು ಸುನೀಲ್ ರವರು ಪ್ರಕರಣದಲ್ಲಿ ಸಹಕರಿಸಿರುತ್ತಾರೆ
.