ಬೆಳ್ತಂಗಡಿ : ವಿವಿಧ ಜಾತಿ, ಮತ, ಸಂಸ್ಕಾರದ ಹಿನ್ನೆಲೆಯಿಂದ ಬಂದರೂ ಎಲ್ಲಾ ವಿದ್ಯಾರ್ಥಿಗಳು ಕಾಲೇಜು ಹಾಗೂ ವಿದ್ಯಾರ್ಥಿನಿಲಯದಲ್ಲಿ ಹೊಸ ಜೀವನಶೈಲಿಗೆ ಹೊಂದಿಕೊಂಡು ಪರಸ್ಪರ ಹೊಂದಾಣಿಕೆ, ಪ್ರೀತಿ-ವಿಶ್ವಾಸ, ಜೀವನಾನುಭವ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೊಂದಿ ಜೀವನಾನುಭವ ಮತ್ತು ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಮುಂದೆ ವಿಶ್ವಮಾನವರಾಗಿ ಸಾರ್ಥಕ ಜೀವನ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅವರು ಬುಧವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿಗೆ ಪ್ರಥಮ ವರ್ಷದ ಎಂಜಿನಿಯರಿಂಗ್ ಪದವಿ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇಂದ್ರಪ್ರಸ್ಥ ಸಭಾಭವನದಲ್ಲಿ ಆಯೋಜಿಸಿದ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಹಿತವಚನ ನೀಡಿ ಶುಭ ಹಾರೈಸಿದರು.
ಗ್ರಂಥಾಲಯದ ಸದುಪಯೋಗ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಹಾಜರಾಗಿ ಬುದ್ಧಿವಂತಿಕೆ ಹಾಗೂ ಪರಿಣತಿಯನ್ನು ಹೊಂದಬೇಕು. ಪ್ರಯೋಗಶಾಲೆಯಲ್ಲಿ ಕೌಶಲಾಭಿವೃದ್ಧಿ ಮತ್ತು ವ್ಯಾವಹಾರಿಕ ಜ್ಞಾನ ಸಂಪಾದನೆಯೊಂದಿಗೆ ಮುಂದೆ ಜೀವನದಲ್ಲಿ ಏಕಾಗ್ರತೆಯೊಂದಿಗೆ ಉದ್ಯೋಗದಲ್ಲಿಯೂ ಪರಿಪೂರ್ಣತೆ ಮತ್ತು ಉತ್ಕೃಷ್ಟತೆಯನ್ನು ಸಾಧಿಸಬೇಕು ಎಂದು ಹೆಗ್ಗಡೆಯವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು.
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್‌ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ರವೀಶ್ ಪಡುಮಲೆ ಧನ್ಯವಾದವಿತ್ತರು. ಉಪನ್ಯಾಸಕರಾದ ಡಾ. ವಿದ್ಯಾ ಕೆ, ಮತ್ತು ಕುಮಾರಿ ನಿಶ್ಚಿತಾ, ಎಂ. ಕಾರ್ಯಕ್ರಮ ನಿರ್ವಹಿಸಿದರು