ಬೆಳ್ತಂಗಡಿ ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ಉಪ ಚುನಾವಣೆಯು ಅಕ್ಟೋಬರ್ 21 ರ ಸೋಮವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ, ಎಂದು ಚುನಾವಣಾಧಿಕಾರಿ ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಮಾಹಿತಿ ನೀಡಿದರು. ಅವರು ಅ 20 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಚುನಾವಣಾ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದು ಕೊಂಡಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಪಟ್ಟಣ ಪಂಚಾಯತ್ ಸೇರಿದಂತೆ 49 ಗ್ರಾಮ ಪಂಚಾಯತ್ ನ ಮತಕೇಂದ್ರಗಳಲ್ಲಿ ಮತದಾನ ನಡೆಯಲಿದ್ದು ಮತ ಕೇಂದ್ರದ ನೂರು ಮೀಟರ್ ಅಂತರದಲ್ಲಿ ವಾಹನ ಸಂಚಾರಕ್ಕೆ ಹಾಗೂ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ
ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ನ ಮತ ಕೇಂದ್ರವನ್ನು ಸೂಕ್ಷ್ಮ ಮತ ಕೇಂದ್ರ ಎಂದು ಗುರುತಿಸಲಾಗಿದೆ. ಮತ ಚಲಾಯಿಸಲು ಬರುವ ಮತದಾರರು ಮೊಬೈಲ್ ಪೆನ್ಸ್ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಂಡು ಹೋಗಲು ಅವಕಾಶ ಇರುವುದಿಲ್ಲ,ಮತಗಟ್ಟೆ ಅಧಿಕಾರಿ ಮತಪತ್ರದೊಂದಿಗೆ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ ನಲ್ಲಿ ಮಾತ್ರ ಮತ ಚಲಾಯಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದರು.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ ತಿಳಿಸಿದರು.