ಬೆಳಾಲು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ,ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ ಬಗ್ಗೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಹಿನ್ನೆಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ಇವಿಎಂ ಬಳಸಿ ಮಾಡಲಾಯಿತು.
ಚುನಾವಣಾ ಅಧಿಸೂಚನೆ,ನಾಮಪತ್ರ ಸಲ್ಲಿಕೆ,ಪರಿಶೀಲನೆ, ಚಿಹ್ನೆ ಗಳ ವಿತರಣೆ, ಚುನಾವಣಾ ಪ್ರಚಾರ ಪ್ರಕ್ರಿಯೆಗಳು ನಡೆದು,ಚುನಾವಣೆಯ ದಿನ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಶಿಸ್ತಿನಿಂದ ಬಂದು,ತಮ್ಮ ಗುರುತು ಪತ್ರ ತೋರಿಸಿ ಮತ ಚಲಾಯಿಸಿದರು.
ಸಾರ್ವತ್ರಿಕ ಚುನಾವಣೆಗಳಲ್ಲಿ ಬಳಸುವ ರೀತಿಯಲ್ಲಿ ಇವಿಎಂ ಮಾದರಿಯ ಮೊಬೈಲ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿ ಸಂಭ್ರಮ ಪಟ್ಟರು. ಮತ ಚಲಾಯಿಸಿದ ವಿದ್ಯಾರ್ಥಿಗಳ ಬೆರಳಿಗೆ ಇಂಕ್ ಗುರುತು ಹಾಕಲಾಯಿತು.
ಕೊನೆಯಲ್ಲಿ ಮತ ಎಣಿಕೆಯನ್ನು ಸಹ ಕ್ರಮಬದ್ಧವಾಗಿ ನಡೆಸಲಾಯಿತು.
ಶಾಲಾ ವಿದ್ಯಾರ್ಥಿ ನಾಯಕನಾಗಿ ಮನ್ವಿತ್ ಎಂ.ಎಸ್,ಉಪನಾಯಕನಾಗಿ ಚಿರಾಗ್ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಆಧ್ಯಾ,ಆರೋಗ್ಯ ಮಂತ್ರಿಯಾಗಿ ಪ್ರೀತೇಶ್,ಆಹಾರ ಮತ್ತು ಗ್ರಂಥಾಲಯ ಮಂತ್ರಿಯಾಗಿ ಅದ್ವಿತ್,ಕ್ರೀಡಾ ಮಂತ್ರಿಯಾಗಿ ಪ್ರಣಮ್ಯ,ನೀರಾವರಿ ಮಂತ್ರಿಯಾಗಿ ವೀಕ್ಷಿತಾ,ವಾರ್ತಾ ಮಂತ್ರಿಯಾಗಿ ಶ್ರೇಯಾ,ಸ್ವಚ್ಚತಾ ಮಂತ್ರಿಯಾಗಿ ತೃಷಾ,ತೋಟಗಾರಿಕೆ ಮಂತ್ರಿಯಾಗಿ ಆದಿತ್ಯ ಹಾಗೂ ವಿರೋಧ ಪಕ್ಷದ ನಾಯಕರಾಗಿ ತನ್ವಿ ಮತ್ತು ಶ್ರಾವಣಿ ಆಯ್ಕೆಯಾದರು.
ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಎಂ.ರ ಮಾರ್ಗದರ್ಶನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕರಾದ ಹರಿಣಾಕ್ಷಿ ಎನ್,ಕರಿಯಣ್ಣ ಗೌಡ ಸಹಕರಿಸಿದರು.