ಶಿಬಿ, ಧರ್ಮಸ್ಥಳ.
ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಚಿತ್ರಣವನ್ನು ಗಮನಿಸುತ್ತಾ ಹೋದಾಗ ಜಿಲ್ಲೆಯ ಸಾಮಾನ್ಯ ರಾಜಕೀಯಕ್ಕಿಂತ ಭಿನ್ನವಾಗಿರುವ ರಾಜಕೀಯವನ್ನು ಬೆಳ್ತಂಗಡಿಯಲ್ಲಿ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿದೆ. ತಾಲೂಕಿನಲ್ಲಿರುವ ಈ ರಾಜಕೀಯ ಬದಲಾವಣೆಯ ಕ್ರೆಡಿಟ್ ಸಂಪೂರ್ಣವಾಗಿ ಮಾಜಿ ಶಾಸಕ ವಸಂತ ಬಂಗೇರರಿಗೆ ಸಲ್ಲುತ್ತದೆ. ಬೆಳ್ತಂಗಡಿಯ ರಾಜಕೀಯ ಎತ್ತ ಸಾಗಬೇಕು ಎಂದು ನಿರ್ಧರಿಸುವಲ್ಲಿ ಬಂಗೇರರು ನಿರ್ವಹಿಸುವ ಪಾತ್ರ ಅತ್ಯಂತ ಹಿರಿಯದಾಗಿರುತ್ತದೆ. ಕಳೆದ ನಾಲ್ಕು ದಶಕಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಬಂಗೇರರು ತಾಲೂಕಿನ ರಾಜಕೀಯವನ್ನು ನಿಯಂತ್ರಿಸುತ್ತ ಬಂದಿದ್ದಾರೆ.
ಕಾಲೇಜು ದಿನಗಳಲ್ಲಿಯೇ ತನ್ನ ಅಣ್ಣ ಚಿದಾನಂದ ಅವರ ಬೆನ್ನಿಗೆ ನಿಂತು ಕಾಂಗ್ರೆಸ್ ಪಕ್ಷವನ್ನು ಸೇರಿ ತನ್ನ ರಾಜಕೀಯ ಜೀವನವನ್ನು 1968 ರಲ್ಲಿ ಆರಂಭಿಸಿದ ವಸಂತ ಬಂಗೇರ ಅವರು ಅಲ್ಲಿಂದ ಮುಂದುವರಿದು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸಂಚರಿಸಿ ಅಲ್ಲೆಲ್ಲ ಶಾಸಕರೂ ಆಗಿ ಇದೀಗ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಕೆಲಸ ಮಾಡಿದ್ದಾರೆ. ಅವರ ಈ ರಾಜಕೀಯ ಪರಿಭ್ರಮಣೆಯೇ ಬೆಳ್ತಂಗಡಿಯ ರಾಜಕೀಯ ಚರಿತ್ರೆಯಾಗಿದೆ.
ಬಂಗೇರರು ಕಾಂಗ್ರೆಸ್ಸಿಗರಾಗಿ ರಾಜಕೀಯವನ್ನು ಆರಂಭಿಸಿದರೂ ಎಪ್ಪತ್ತರ ದಶಕದಲ್ಲಿ ಅವರನ್ನು ಹೆಚ್ಚು ಆಕರ್ಷಿಸಿದ್ದು ಜೆಪಿ ಚಳವಳಿ ಹಾಗೂ ಜನತಾ ರಾಜಕೀಯ. ಅವರ ಸಹೋದರ ಮೊದಲು ಕಾಂಗ್ರೆಸ್ ಪಕ್ಷದಿಂದ ಶಾಸಕರಾದರೂ ಬಂಗೇರರು ಅದೇ ದಾರಿಯಲ್ಲಿ ಹೆಚ್ಚು ಮುಂದುವರಿಯಲಿಲ್ಲ. ಆಗ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಂತಿತ್ತು. ಆ ಸಂದರ್ಭದಲ್ಲಿ ಅವರು ಕಾಂಗ್ರೆಸ್-ವಿರೋಧಿ ರಾಜಕೀಯವನ್ನೇ ಬೆಂಬಲಿಸಿದರು, ಅನುಸರಿಸಿದರು. ಶೂನ್ಯದಿಂದಲೇ ಆರಂಭಿಸಿ ಎಲ್ಲವನ್ನು ಗೆದ್ದುಕೊಂಡರು. ಅವರ ವ್ಯಕ್ತಿ ಪ್ರಭಾವದಿಂದಲೇ ಬೆಳ್ತಂಗಡಿಯ ಜನರ ಮನಸ್ಸಿನಲ್ಲಿ ರಾಜಕೀಯವೆಂದರೆ ಅದು ವಸಂತ ಬಂಗೇರ ಎಂಬತೆ ಬಿಂಬಿತರಾದರು. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಜನರ ನಡುವೆಯೇ ಇದ್ದುಕೊಂಡು ಜನನಾಯಕರಾಗಿ ರೂಪುಗೊಂಡರು.
ಅವರು ಚುನಾವಣೆಗಳಲ್ಲಿ ಸೋಲನ್ನು ಕಂಡಿರಬಹುದು ಆದರೆ ಅವರು ಬೆಳೆದು ನಿಂತಿರುವ ಎತ್ತರಕ್ಕೆ ತಾಲೂಕಿನ ಮತ್ತೋರ್ವ ನಾಯಕನು ನಿಲ್ಲಲು ಸಾಧ್ಯವಾಗಿಲ್ಲ ಎಂಬುದು ವಿಶೇಷ. ಬಂಗೇರರಿಗೆ ಅವರ ರಾಜಕೀಯ ಜೀವನದ ಆರಂಭದಿಂದ ಇತ್ತೇಚೆಗಿನ ವರೆಗೂ ಪ್ರಬಲವಾದ ರಾಜಕೀಯ ಪಕ್ಷಗಳ ಶ್ರೀರಕ್ಷೆ ಇರಲಿಲ್ಲ. ಅವರು ಬಹುತೇಕ ಸಂದರ್ಭಗಳಲ್ಲಿ ಏಕಾಂಗಿಯೇ ರಾಜಕೀಯದಲ್ಲಿ ತಾನು ಪ್ರತಿನಿಧಿಸುವ ಪಕ್ಷವನ್ನು ಮುನ್ನಡೆಸಬೇಕಾಗಿ ಬಂದಿದೆ. ಆರ್ಥಿಕವಾಗಿಯೂ ಹೇಳಿಕೊಳ್ಳುವಂತಹ ಶಕ್ತಿಯೇನು ಬಂಗೇರ ಅವರಿಗಿಲ್ಲ. ಆದರೂ ಈ ಕೊರತೆ ಗಳೆಲ್ಲವನ್ನೂ ಅವರು ತಮ್ಮ ವ್ಯಕ್ತಿ ಪ್ರಭಾವದಿಂದಲೇ ಮೀರಿ ನಿಂತಿದ್ದಾರೆ. ಜನತೆಯೊಂದಿಗೆ ಇದ್ದರೆ ಜನರೂ ಕೈ ಬಿಡಲಾರರು ಎಂಬ ನಂಬಿಕೆಯೊಂದಿಗೆ ಅವರು ಕಾರ್ಯತಂತ್ರ ರೂಪಿಸಿ ರಾಜಕೀಯ ನಡೆಸುತ್ತಿದ್ದಾರೆ. ಜನತೆ ಅವರ ನಂಬಿಕೆಗೆ ದ್ರೋಹ ಬಗೆದಿಲ್ಲ. ಬಂಗೇರರ ರಾಜಕೀಯದ ಪ್ರತಿಯೊಂದು ಹಂತವನ್ನು ಅವಲೋಕಿಸಿದಾಗ ಅವರು ರಾಜಕೀಯದಲ್ಲಿ ಸಾಧಿಸುವುದು ತಮ್ಮ ಪ್ರಯತ್ನದಿಂದಲೇ ಎಂಬುವುದು ಸ್ಪಷ್ಟವಾಗುತ್ತದೆ ಸಾವಿರ 1976 ರಲ್ಲಿ ಬಂಗೇರರ ತಂದೆ ಕೇದೆ ಸುಬ್ಬ ಪೂಜಾರಿ ಅವರು ನಿಧನರಾದರು ಹಿರಿಯ ಮಗನಾದ ಬಂಗೇರರ ಪಾಲಿಗೆ ಕುಟುಂಬದ ಜವಾಬ್ದಾರಿಗಳು ಬಂದವು. ತಂದೆಯವರು ನಿರ್ವಹಿಸುತ್ತಿದ್ದ ಸಾಮಾಜಿಕ ಕಾರ್ಯಗಳನ್ನೂ ಅವರೇ ನಿರ್ವಹಿಸಬೇಕಾಯಿತು ಬಂಗೇರರ ಸಾರ್ವಜನಿಕ ಜೀವನಕ್ಕೆ ಅದೇ ಅಡಿಗಲ್ಲಾಯಿತು. 1968ರ ವಿಧಾನಸಭಾ ಚುನಾವಣೆ ಅಧಿಕೃತ ರಾಜಕೀಯ ಪ್ರವೇಶಕ್ಕೆ ವೇದಿಕೆ ಆಯಿತು. ಸಾರ್ವಜನಿಕ ಬದುಕಿನಲ್ಲಿದ್ದ ಅವರು ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡರು. ಊರಿನ ಪಂಚಾಯತಿಕೆ ಗಳು, ಸಮಸ್ಯೆಗಳ ಪರಿಹಾರ, ಯುವಕರ ಸಂಘಟನೆಗಳ ಮೂಲಕವಾಗಿ ತಮ್ಮ ಸಾರ್ವಜನಿಕ ಬದುಕನ್ನು ರೂಪಿಸುತ್ತಾರೆ. ಬಂಗೇರರು ತುರ್ತು ಪರಿಸ್ಥಿತಿಯಲ್ಲಿ ಓರ್ವ ಸಂಪೂರ್ಣ ರಾಜಕಾರಣಿಯಾಗಿ ರೂಪುಗೊಂಡರು ಸಕ್ರಿಯ ರಾಜಕಾರಣಿಯಾದ ಬಂಗೇರರ ಚುನಾವಣೆ ರಾಜಕೀಯಕ್ಕೆ ಸಾವಿರ 1978 ರ ಪಂಚಾಯತ್ ಚುನಾವಣೆ ವೇದಿಕೆಯಾಯಿತು. ಕುವೆಟ್ಟು ಗ್ರಾಮ ಪಂಚಾಯತಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದಾಗ ಗುರುವಾಯನಕೆರೆ ನಾಗರಿಕ ಸೇವಾ ಸಮಿತಿಯವರು ಅವರ ನೆರವಿಗೆ ನಿಂತು ಬೆಂಬಲ ನೀಡಿ ಪ್ರೋತ್ಸಾಹಿಸಿದರು. ಪಂಚಾಯತ್ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು. ಮುಂದೆ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೂ ಅವರ ವಿರುದ್ಧ ಯಾರು ಸ್ಪರ್ಧಿಸಲಿಲ್ಲ. ಹೀಗೆ ಚುನಾವಣಾ ರಾಜಕೀಯದ ಪ್ರವೇಶ ಅವಿರೋಧ ಆಯ್ಕೆ ಯೊಂದಿಗೆ ಆರಂಭವಾಯಿತು. 1978 ರ ಸಮಯದಲ್ಲಿ ಕಾಂಗ್ರೆಸ್ ವಿರೋಧಿ ನಾಯಕರೊಬ್ಬರು ಈ ರೀತಿಯ ಅವಿರೋಧವಾಗಿ ಆಯ್ಕೆಯಾಗಲು ಅವಕಾಶ ದೊರೆತದ್ದು ವಿಶೇಷವಾಗಿತ್ತು. ಅಲ್ಲಿಂದ ಮುಂದೆ ತನ್ನದೇ ಆದ ರಾಜಕೀಯ ರೀತಿ-ನೀತಿಗಳನ್ನು ರೂಪಿಸಿಕೊಂಡ ಬಂಗೇರರು ಒಂಟಿ ಸಲಗನಂತೆ ತಾನು ನಡೆದ್ದೇ ದಾರಿ ಎಂದು ಮುನ್ನುಗ್ಗಿದರು. ಬೆಳ್ತಂಗಡಿಯ ರಾಜಕೀಯದ ನಿರ್ಣಾಯಕ ಶಕ್ತಿಯಾಗಿ ಬೆಳೆದರು. ತಾಲೂಕಿನ ರಾಜಕೀಯವನ್ನು ತನಗಿಷ್ಟ ಬಂದೆಡೆ ತಿರುಗಿಸುವ ಪ್ರಾಬಲ್ಯತೆಯನ್ನು ಪಡೆದರು. ತಾಲೂಕಿನ ಹಳ್ಳಿ -ಹಳ್ಳಿಗಳ ಜನತೆಗೆ ಧ್ವನಿಯಾಗಿ ಅವರೆಲ್ಲರ ನಾಯಕರಾಗಿ ಬೆಳೆದರು.
ಕುವೆಟ್ಟು ಪಂಚಾಯತು ಚುನಾವಣೆಯಲ್ಲಿ ಬಂಗೇರರು ಇಟ್ಟ ಹೆಜ್ಜೆ ತಾಲೂಕಿನ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು. 198 3 ರ ವಿಧಾನಸಭಾ ಚುನಾವಣೆ ಬೆಳ್ತಂಗಡಿ ಪಾಲಿಗೆ ಐತಿಹಾಸಿಕವಾಗಿ ಮೂಡಿ ಬಂದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣಿ ಗಳೆಲ್ಲರೂ ಒಂದೇ ವೇದಿಕೆಯಲ್ಲಿ ನಿಂತು ಚುನಾವಣೆಯನ್ನು ಎದುರಿಸಿದರು ಬದಲಾವಣೆಯನ್ನು ಬಯಸಿದ್ದ ಜನತೆ ಒಂದಾಗಿ ಸಮಗ್ರ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ವಸಂತ ಬಂಗೇರ ರನ್ನು ಕಣಕ್ಕಿಳಿಸಿದರು. ಅವರೇ ವಿವರಿಸುವಂತೆ ವಿವಿಧ ಕಾರಣಗಳಿಂದ ಅವರಿಗೆ ಬಿಜೆಪಿಯ ಕಮಲದ ಚಿಹ್ನೆಯಲ್ಲಿ ಸ್ಪರ್ಧಿಸಬೇಕಾಗಿ ಬಂದಿತ್ತು ಆ ಸಂದರ್ಭದಲ್ಲಿ ಕರಾವಳಿಯಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸಿತ್ತು ಬೆಳ್ತಂಗಡಿಯಲ್ಲಿ ಅದರ ಪ್ರಭಾವ ಅತ್ಯಂತ ತೀವ್ರವಾಗಿತ್ತು. ಬಂಗೇರರು ತಮ್ಮ ಪ್ರಥಮ ಚುನಾವಣೆಯಲ್ಲಿ ಆಗ ಸಚಿವರಾಗಿದ್ದ ಕೆ ಗಂಗಾಧರ ಗೌಡ ಅವರನ್ನು ಸುಮಾರು 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು (ರಾಜಕೀಯದ ಪರಿಭ್ರಮಣೆಯಲ್ಲಿ ಇದೀಗ ಅವರಿಬ್ಬರೂ ಒಂದೇ ಪಕ್ಷದಲ್ಲಿದ್ದಾರೆ) ಬೆಳ್ತಂಗಡಿಯ ರಾಜಕೀಯದಲ್ಲಿ ಹೊಸ ಬದಲಾವಣೆಗೆ ಚಾಲನೆ ನೀಡಿದರು. ಅಂದಿನ ಆ ಚುನಾವಣೆಯನ್ನು ಬಂಗೇರರೊಂದಿಗೆ ಇದ್ದವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಚುನಾವಣಾ ಖರ್ಚಿಗೆ ಹಣವಿರಲಿಲ್ಲ ಅವರ ಕರ‍್ಯಕರ್ತರು ಮನೆಗೆ ಹೋಗಿ ಓಟು ಹಾಗು ನೊಟನ್ನು ಕೇಳುತ್ತಿದ್ದರು. ಜನರು ನೋಟಿನ ಮಾಲೆ ಹಾಕಿಯೇ ಬಂಗೇರರನ್ನು ಸ್ವಾಗತಿಸುತ್ತಿದ್ದರು. ಜನರ ಖರ್ಚಿನಲ್ಲಿಯೇ ಆ ಚುನಾವಣೆ ನಡೆದಿತ್ತು ಎಂಬುದು ವಿಶೇಷ. ಅಂದು ಅವರೊಂದಿಗೆ ಕರಾವಳಿ ಹಾಗೂ ಮಲೆನಾಡಿನಿಂದ ಬಿಜೆಪಿಯ ಹಲವಾರು ಶಾಸಕರುಗಳು ಗೆದ್ದು ಬಂದರು ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ರಾಜ್ಯದಲ್ಲಿ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂತು ರಾಮಕೃಷ್ಣ ಹೆಗ್ಡೆಯವರು ಮುಖ್ಯಮಂತ್ರಿಗಳಾದರು. ಮೊದಲ ಬಾರಿಗೆ ಶಾಸಕರಾದ ಬಂಗೇರ ಅವರು ಮಂಗನಕಾಯಿಲೆಯಂತಹ ಸವಾಲುಗಳನ್ನು ಎದುರಿಸಬೇಕಾಗಿ ಬಂದಿತ್ತು. ಆದರೆ ಯುವ ನಾಯಕ ಬಂಗೇರ ಯಾವುದಕ್ಕೂ ಹಿಂಜರಿಯಲಿಲ್ಲ ಜನರ ನಡುವೆಯೇ ಇದ್ದುಕೊಂಡು ಜನರ ಪ್ರೀತಿಯನ್ನು ಗಳಿಸಿದರು.
ರಾಜ್ಯದಲ್ಲಿ ನಡೆದ ರಾಜಕೀಯ ಬದಲಾವಣೆಗಳ ಕಾರಣದಿಂದ ಮಧ್ಯಂತರ ಚುನಾವಣೆ ಎದುರಾಯಿತು. ಈ ವೇಳೆಗೆ ರಾಜಕೀಯ ಚಿತ್ರಣವೇ ಬದಲಾಗಿತ್ತು, ಬಂಗೇರರು ಅಧಿಕೃತವಾಗಿ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದರು ಚುನಾವಣೆ ಮುಗಿದಾಗ ಬಂಗೇರರು ಗೆದ್ದಿದ್ದರು. ಆದರೆ ಅವರೊಂದಿಗೆ ಹಿಂದಿನ ಅವಧಿಯಲ್ಲಿ ಇದ್ದ ಬಿಜೆಪಿ ಶಾಸಕರುಗಳೆಲ್ಲರೂ ಸೋಲನ್ನು ಕಂಡಿದ್ದರು. ಜಿಲ್ಲೆಯಾದ್ಯಂತ ಬಿಜೆಪಿ ಸೋತರೂ ಬಂಗೇರರು ತಮ್ಮ ವ್ಯಕ್ತಿ ಪ್ರಭಾವದಿಂದಲೇ ಬೆಳ್ತಂಗಡಿ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಶಾಸಕತ್ವದ ಮೊದಲ ಅವಧಿಯಲ್ಲಿ ಬಂಗೇರರು ಯಾವ ಪ್ರಮಾಣದಲ್ಲಿ ಜನ ಸೇವಾ ಕಾರ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ ಆಯಿತು. 1985 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಇದ್ದುದು ಕೇವಲ ಇಬ್ಬರು ಶಾಸಕರುಗಳು ಮಾತ್ರ ಒಬ್ಬರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅರದ್ದಾಗಿದ್ದರೆ ಇನ್ನೊಬ್ಬರು ಬೆಳ್ತಂಗಡಿಯ ವಸಂತ ಬಂಗೇರರಾಗಿದ್ದರು. ಬಂಗೇರರು ರಾಜಕೀಯದಲ್ಲಿ ಬೆಳೆಸಿಕೊಂಡ ವ್ಯಕ್ತಿ ಪ್ರಬಾವ ಎಷ್ಟಿದ್ದಿರಬಹುದು ಎಂಬುದನ್ನು ಇದರಿಂದಲೇ ಊಹಿಸಬಹುದಾಗಿದೆ.
ತಾಲೂಕಿನ ಎಲ್ಲಾ ವರ್ಗದ ಎಲ್ಲಾ ಜಾತಿಯ ಜನತೆಯನ್ನು ಒಂದಾಗಿ ಸೇರಿಸಿಕೊಂಡು ಅಭಿವೃದ್ಧಿಯ ಪಥದಲ್ಲಿ ಮುಂದುವರಿಸಬೇಕೆಂಬುದು ಬಂಗೇರರ ದೃಷ್ಟಿಕೋನ ವಾಗಿತ್ತು. ಬಿಜೆಪಿ ಯಲ್ಲಿದ್ದುಕೊಂಡು ಈ ಕೆಲಸ ಮಾಡುವುದು ತನಗೆ ಕಷ್ಟಕರವಾಗಿ ಕಂಡುಬಂದಿತು. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗ್ಗಡೆಯವರಂತಹ ಧೀಮಂತ ನಾಯಕರುಗಳು ಬಂಗೇರರ ನಾಯಕತ್ವವನ್ನು ಗುರುತಿಸಿ ಆಗ ರಾಜ್ಯದ ಮುಖ್ಯಧಾರೆಯಲ್ಲಿದ್ದ ಜನತಾ ಪಕ್ಷಕ್ಕೆ ಬರಮಾಡಿಕೊಂಡರು. ಬಂಗೇರರು ಜನತಾ ಪಕ್ಷಕ್ಕೆ ಹೋದಾಗ ಅವರೊಬ್ಬರೇ ಹೋಗಲಿಲ್ಲ ತನ್ನ ಎಲ್ಲ ಬೆಂಬಲಿಗರನ್ನೂ ಕರೆದುಕೊಂಡೇ ಹೋಗಿದ್ದರು ಆ ವರೆಗೂ ತಾಲೂಕಿನಲ್ಲಿ ಹೆಸರಿಗೆ ಮಾತ್ರ ಇದ್ದ ಪಕ್ಷ ಬಂಗೇರರು ಬಂದಾಗ ಮುಖ್ಯ ಪಕ್ಷವಾಗಿ ರೂಪಗೊಂಡಿತ್ತು. 1989ರ ಚುನಾವಣೆ ಬಂಗೇರರ ಪಾಲಿಗೆ ಅಗ್ನಿಪರೀಕ್ಷೆಯಂತಿತ್ತು. ಬಂಗೇರರೇನೋ ಜನತಾಪಕ್ಷಕ್ಕೆ ಹೋಗಿದ್ದರು ಆದರೆ ತಾಲೂಕಿನಲ್ಲಿ ಪಕ್ಷವನ್ನು ಹೊಸದಾಗಿ ಕಟ್ಟಬೇಕಾದ ಅಗತ್ಯವಿತ್ತು ಅಲ್ಪ ಅವಧಿಯಲ್ಲಿಯೇ ಬಂಗೇರರು ಆ ಕಾರ್ಯವನ್ನು ಮಾಡಿದರು ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಕಂಡು ಬಂದಿತ್ತು. ಅದರ ನಡುವೆಯೂ ಅವರು ಬೆಳ್ತಂಗಡಿಯಲ್ಲಿ ತೀವ್ರ ಸ್ಪರ್ಧೆಯನ್ನು ನೀಡಿದರ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಗಂಗಾಧರ ಗೌಡರ ಎದುರು ಅಲ್ಪ ಮತಗಳ ಅಂತರದಲ್ಲಿ ಪರಾಜಿತರಾದರು. ಅವರ ಸೋಲು ಗೆಲುವಿನ ವಿಚಾರ ಕಿಂತಲೂ ಅವರು ಹೊಸ ಪಕ್ಷವೊಂದನ್ನು ಕಟ್ಟಿದ ರೀತಿಯೇ ಅವರ ನಾಯಕತ್ವ ಗುಣಕ್ಕೆ ಸಾಕ್ಷಿಯಾಗಿದೆ. 1994ರ ಚುನಾವಣೆಯ ವೇಳೆಗೆ ರಾಜ್ಯದಲ್ಲಿ ಮತ್ತೆ ರಾಜಕೀಯ ಬದಲಾವಣೆಗಳಾದವು . ಬಂಗೇರರು ಜನತಾದಳದ ಚಕ್ರದ ಚಿಹ್ನೆಯಲ್ಲಿ ಸ್ಪರ್ಧಿಸಿ ಮತ್ತೊಮ್ಮೆ ಗೆಲುವನ್ನು ಕಂಡರು. ಮೂರನೇ ಬಾರಿಗೆ ಶಾಸಕರಾದರು. ಈ ಅವಧಿಯಲ್ಲಿ ಬಂಗೇರರಿಗೆ ಸಚಿವರಾಗುವ ಅವಕಾಶ ದೊರಕಬಹುದು ಎಂದೇ ಭಾವಿಸಲಾಗಿತ್ತು ಆದರೆ ಕಾರಣಾಂತರಗಳಿಂದ ಅವರಿಗೆ ಸಚಿವ ಸ್ಥಾನ ದೊರಕಲಿಲ್ಲ. ಆದರೆ ಆಗಿನ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಅವರು ಬಂಗೇರ ಅವರನ್ನು ರಾಜ್ಯ ಸರಕಾರದ ಮುಖ್ಯ ಸಚೇತಕರಾಗಿ ನೇಮಿಸಿದರು. ವಿಧಾನಸಭೆಯಲ್ಲಿ ಅತ್ಯಂತ ಜವಾಬ್ದಾರಿಯುತ ಕೆಲಸಗಳಲ್ಲಿ ಒಂದಾಗಿರುವ ಸಚೇತಕ ಕಾರ್ಯವನ್ನು ಅವರು ಸಮರ್ಥವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದರು. ಈ ಬಾರಿಯ ಚುನಾವಣೆಯ ವೇಳೆಗೆ ಬಿಜೆಪಿಯು ತಾಲೂಕಿನಲ್ಲಿ ಪ್ರಬಲವಾಗಿ ನೆಲೆಯನ್ನು ಕಂಡು ಕೊಂಡಿತ್ತು. ವ್ಯಕ್ತಿ ಪ್ರಭಾವದಿಂದಲೇ ಬಂಗೇರರು ಕ್ಷೇತ್ರದಲ್ಲಿ ಪಕ್ಷವನ್ನು ಉಳಿಸಿಕೊಂಡಿದ್ದರು.
ರಾಜಕೀಯ ಹಿನ್ನಡೆಯ ದಿನಗಳು:
ಮುಂದಿನ ಒಂದು ದಶಕ ವಸಂತ ಬಂಗೇರರ ಪಾಲಿಗೆ ಅತ್ಯಂತ ಹಿನ್ನಡೆಯ ದಿನಗಳಾಗಿದ್ದವು. ಅವರ ಪಕ್ಷ ಜನತಾದಳ ಹಲವು ಹೋಳುಗಲಗಿ ಒಡೆದು ಹೋದವು. ರಾಜ್ಯದಾಧ್ಯಂತ ಪಕ್ಷಕ್ಕೆ ಹಿನ್ನಡೆಯಾಯಿತು. ಅದರ ಪ್ರಬಾವ ಬೆಳ್ತಂಗಡಿಯಲ್ಲಯೂ ನೇರವಾಗಿಯೇ ಕಾಣಿಸಿತ್ತು. 1999ರ ವಿಧಾನಸಭಾ ಚುನಾವಣೆಯಲ್ಲಿ ಬಂಗೇರರು ಹೆಚ್.ಡಿ ದೇವೇಗೌಡರ ನೇತೃತ್ವದ ಜಾತ್ಯಾತೀತ ಜನತಾದಳದ ಟ್ರಾಕ್ಟರ್ ಚಿಹ್ನೆಯಲ್ಲಿ ಸ್ಪರ್ಧಿಸಿದರು. ಕೊನೆಯ ಕ್ಷಣದಲ್ಲಿ ಸಿಕ್ಕಿದ ಈ ಚಿಹ್ನೆಯನ್ನು ಜನರಿಗೆ ಸರಿಯಾಗಿ ಪರಿಚಯಿಸಲೂ ಅವರಿಗೆ ಅವಕಾಶ ಲಭಿಸುವ ಮೊದಲೇ ಚುನಾವಣೆ ಮುಗಿದು ಹೋಗಿತ್ತು. ತನ್ನ ಕಿರಿಯ ಸಹೋದರ ಪ್ರಭಾಕರ ಬಂಗೇರ ಅವರ ವಿರುದ್ದ ಸೋಲನ್ನು ಕಂಡರು. ಇದರೊಂದಿಗೆ ಕರಾವಳಿಯಲ್ಲಿ ಜನತಾಪರಿವಾರದ ಅವಸಾನವೂ ಆರಂಭವಾಯಿತು. ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಬಂಗೇರರು ಪಕ್ಷ ಸಂಘಟನೆಯ ಕರ‍್ಯಗಳನ್ನು ಮಾಡಿದರೂ ಅದು ಯಾವುದೂ ಯಶ್ಸು ನೀಡಲಿಲ್ಲ. ಬಳಿಕ ನಡೆದ 2004ರ ಚುನಾವಣೆಯಲ್ಲಿ ಮತ್ತೊಮ್ಮೆ ಕಿರಿಯ ಸಹೋದರ ಪ್ರಭಾಕರ ಬಂಗೇರ ಎದುರು ಸೋಲನ್ನು ಕಾಣಬೇಕಾಯಿತು. ಸತತ ಎರಡು ಚುನಾವಣೆಗಳ ಸೋಲು ಎಂತಹ ರಾಜಕಾರಣಿಯ ಆತ್ಮಸ್ಥೈರ್ಯವನ್ನೂ ಕೆಡಿಸುತ್ತದೆ ಆದರೆ ಬಂಗೇರರು ಮಾತ್ರ ಇದು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಎಂದಿನಂತೆ ಜನರ ನಡುವೆ ಇದ್ದು ಅವರ ಕೆಲಸ ಮಾಡುತ್ತಾ ತಮ್ಮ ರಾಜಕೀಯವನ್ನು ಮುಂದುವರಿಸಿದ್ದರು ಯಾವೆಲ್ಲ ರಾಜಕೀಯ ಬದಲಾವಣೆಯಾಗಲಿ ವಸಂತ ಬಂಗೇರರು ತಮ್ಮದೇ ಆದ ಒಂದು ರಾಜಕೀಯ ಬೆಂಬಲಿಗರನ್ನು ಬೆಳ್ತಂಗಡಿಯಲ್ಲಿ ರೂಪಿಸಿಕೊಂಡಿದ್ದರು. ಆಮೂಲಕವಾಗಿಯೇ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ನಿರಂತರವಾದ ಗೆಲುವನ್ನು ತಂದು ಕೊಡುತ್ತಿದ್ದರು.
ತನ್ನ ರಾಜಕೀಯ ಜೀವನದ ಆರಂಭದಲ್ಲಿ ಬಂಗೇರ ರೊಂದಿಗೆ ಕಾಂಗ್ರೆಸ್ ವಿರೋಧಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಯುವಕರ ದಂಡೇ ಇತ್ತು. ತನ್ನೊಂದಿಗೆ ಯುವಕರನ್ನು ಕೈಬಿಡದೆ ಮುನ್ನಡೆಸಿದ ಬಂಗೇರರು ಆರಂಭದ ದಿನಗಳಲ್ಲಿ ತಾಲೂಕಿನಲ್ಲಿ ದ್ವಿತೀಯ ಹಂತದ ನಾಯಕರುಗಳನ್ನು ಅದ್ಭುತವಾಗಿಯೇ ಬೆಳೆಸಿದ್ದಾರೆ. ಗ್ರಾಮ ಮಟ್ಟದಲ್ಲಿರುವ ಈ ನಾಯಕರುಗಳೇ ಅವರ ರಾಜಕೀಯ ಜೀವನದ ಯಶಸ್ಸಿನ ಗುಟ್ಟು ಆಗಿತ್ತು.
ಮರಳಿ ಮಾತೃ ಪಕ್ಷಕ್ಕೆ:
ವಸಂತ ಬಂಗೇರರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದು ಅಣ್ಣ ಚಿದಾನಂದ ಅವರೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಆಗಿತ್ತು. ಕರಾವಳಿಯಲ್ಲಿ ಅಸ್ತತಿತ್ವವನ್ನೇ ಕಳೆದುಕೊಳ್ಳುತ್ತಿದ್ದ ಜನತಾದಳದಲ್ಲಿ ಮುಂದುವರಿಯುವುದಕ್ಕೆ ಅವರ ಬಹುತೇಕ ಬೆಂಬಲಿಗರು ಸದಾ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಇದೇ ವೇಳೆಗೆ ರಾಜ್ಯ ರಾಜಕೀಯದಲ್ಲಿಯೂ ಬದಲಾವಣೆಗಳು ಕಾಣಿಸಿಕೊಳ್ಳಲಾರಂಭಿಸಿತ್ತು. ಬಂಗೇರರಿಗೆ ಅತ್ಯಂತ ಆಪ್ತರಾಗಿದ್ದ ಸಿದ್ದರಾಮಯ್ಯ ಅವರು ಜನತಾದಳದಿಂದ ಹೊರಬಂದು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಇದು ಬಂಗೇರರ ಮೇಲೆಯೂ ಪ್ರಬಾವ ಬೀರಿತ್ತು. ಕಾಂಗ್ರೆಸ್ಸಿನ ಹಿರಿಯ ಮುಖಮಡರಾಗಿದ್ದ ಕೆ ಹರೀಶ್ ಕುಮಾರ್ ಅವರೂ ಬಂಗೇರರು ಕಾಂಗ್ರೆಸ್ಸಿಗೆ ಬರುವುದಕ್ಕೆ ಬೆಂಬಲವಾಗಿ ನಿಂತರು. ಕೊನೆಗೂ ಕಾಂಗ್ರೆಸ್ ವಿರೋಧೀ ರಾಜಕೀಯದ ವಕ್ತಾರರಾಗಿದ್ದ ವಸಂತ ಬಂಗೇರ ಅವರು ಕಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ರಾಜಕೀಯ ಶತ್ರುಗಳಾಗಿ ಗ್ರಾಮ ಗ್ರಾಮಗಳಲ್ಲಿ ಹೋರಾಡುತ್ತಿದ್ದ ಜನತಾದಳ ಹಾಗು ಕಂಗ್ರೆಸ್ ಕರ‍್ಯಕರ್ತರನ್ನು ಒಟ್ಟಿಗೆ ಸೇರಿಸಬೇಕೆಂದರೆ ಅದೇನು ಸಾಮಾನ್ಯ ಕೆಲಸವಾಗಿರಲಿಲ್ಲ. ವಸಂತ ಬಂಗೇರ ಅವರು ಹಾಗು ಹರೀಶ್ ಕುಮಾರ್ ಅವರು ಗ್ರಾಮ ಗ್ರಾಮಗಳಿಗೆ ತೆರಳಿ ಕರ‍್ಯಕರ್ತರನ್ನು ಒಟ್ಟು ಸೇರಿಸಿದರು. ಈವೇಳೆಗೆ 2009 ರ ಚುನಾವಣೆಯೂ ಬಂದೇ ಬಿಟ್ಟಿತ್ತು. ಬಂಗೇರರು ಕಾಂಗ್ರೆಸ್ ಅಭ್ಯರ್ಥಿಯಾದರು. ಮತ್ತೊಮ್ಮೆ ಸಹೋದರರ ಹೋರಾಟಕ್ಕೆ ವೇದಿಕೆ ಸಿದ್ದವಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ್ದ ಈ ಚುನಾವಣೆಯಲ್ಲಿ ಬೆಳ್ತಂಗಡಿಯಲ್ಲಿ ಬಂಗೇರರು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಬಂಗೇರರು ತನ್ನ ಜನಪರ ಕರ‍್ಯಕ್ರಮಗಳ ಮೂಲಕವಾಗಿ ಜನಮೆಚ್ಚುಗೆಯನ್ನು ಪಡೆದುಕೊಂಡರು 2013 ರ ಚುನಾವಣೆಯಲ್ಲಿ ಅವರು ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ವಸಂತಬಂಗೇರರು ಆಧುನಿಕ ಬೆಳ್ತಂಗಡಿಯನ್ನು ರೂಪಿಸಿದವರು. ತಾಲೂಕಿನ ಅಭಿವೃದ್ದಿಗೆ ಅವರು 1983 ರಿಂದ ಇಂದಿನ ವರೆಗೆ ನೀಡಿರುವ ಕೊಡುಗೆಗಳು ಅಪರಿಮಿತ. ತಾಲೂಕಿನ ಯಾವುದೇ ಮೂಲೆ-ಮೂಲೆಗೆ ಹೋಗಿ ನೋಡಿದರೂ ಅವರು ರೂಪಿಸಿರುವ ಅಭಿವೃದ್ದಿ ಕರ‍್ಯಗಳನ್ನು ಕಾಣಬಹುದಾಗಿದೆ. ಅಭಿವೃದ್ದಿಯ ದೃಷ್ಟಿಯಿಂದ ತಾಲೂಕಿನ ಪಾಲಿಗೆ ಅತ್ಯಂತ ಮಹತ್ವದ ಅವಧಿ ಬಂಗೇರರು ಐದನೇ ಬಾರಿಗೆ ಶಾಸಕರಾಗಿ ಕರ‍್ಯನಿರ್ವಹಿಸಿದ್ದ 2013-2018 ಅವಧಿಯಾಗಿದೆ. ಐದನೆ ಬಾರಿಗೆ ಶಾಸಕನಾಗಿ ಆಯ್ಕೆಯಾದ ಬಂಗೇರರು ಸಚಿವರಾಗುತ್ತಾರೆ ಎಂದೇ ಎಲ್ಲರ ನಿರೀಕ್ಷ ಆಶಯವಾಗಿತ್ತು. ಆದರೆ ರಾಜಕೀಯ ಹಾಗೂ ಇತರೆ ಕಾರಣಗಳಿಂದಾಗಿ ಅವರಿಗೆ ಸಚಿವಸ್ಥಾನ ಕೊನೆಗೂ ಲಭಿಸಲಿಲ್ಲ. ಆದರೆ ಮುಖ್ಯಮಂತ್ರಿಯವರು ಅವರಿಗೆ ಕೈಬಿಚ್ಚಿ ಅನುದಾನಗಳನ್ನು ಕೊಟ್ಟರು. ಇದು ತಾಲೂಕಿನ ಸಮಗ್ರವಾದ ಅಭಿವೃದ್ದಿಗೆ ಸಹಕಾರಿಯಾಯಿತು. ಈ ಅವಧಿಯಲ್ಲಿ ಅತಿ ಹೆಚ್ಚಿನ ಅನುದಾನ ತಾಲೂಕಿಗೆ ಹರಿದು ಬಂದಿತ್ತು ಸುಮಾರು 1,250 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳು ಬೆಳ್ತಂಗಡಿಯಲ್ಲಿ ನಡೆದವು ಎಂದರೆ ತಾಲುಕಿಗೆ ಈ ಅವಧಿಯಲ್ಲಿ ಬಂಗೇರರು ನೀಡಿರುವ ಕೊಡುಗೆಯೇನು ಎಂದು ತಿಳಿಯಲು ಸಾಧ್ಯ.
ಬಂಗೇರರ ಗೆಲುವಿನ ಓಟಕ್ಕೆ 2018 ರ ವಿಧಾನ ಸಭಾ ಚುನಾವಣೆ ಮತ್ತೊಮ್ಮೆ ತಡೆಯೊಡ್ಡಿತ್ತು. ಸಮಾನ್ಯವಾಗಿ ಜನ ವಿಶ್ರಾಂತ ಜೀವನ ನಡೆಸುವ ಈ ಪ್ರಾಯದಲ್ಲಿಯೂ ಬಂಗೇರರು ಸದಾ ಲವಲವಿಕೆಯಿಂದ ಜನರ ನಡುವೆಯೇ ಇದ್ದಾರೆ. ಪ್ರತಿನಿತ್ಯ ತನ್ನ ಬಳಿಗೆ ಬರುವವರ ಕೆಲಸಗಳನ್ನು ಉತ್ಸಾಹದಿಂದಲೇ ಮಾಡುತ್ತಿದ್ದಾರೆ. ಅವರಿಗೆ ಜನರನ್ನು ಬಿಟ್ಟು ಎಂದಿಗೂ ಇರಲಾಗದು.
ಬಾಕ್ಸ್
ಸುಮಾರು ಅರ್ಧ ಶತಮಾಕ್ಕೂ ಅಧಿಕದ ತನ್ನ ರಾಜಕೀಯ ಜೀವನದಲ್ಲಿ ಅವರು ತನಗಾಗಿ ಏನನ್ನೂ ಮಾಡಿಕೊಂಡವರಲ್ಲ. ತನ್ನದೆಲ್ಲವನ್ನೂ ರಾಜಕೀಯಕ್ಕಾಗಿ ಕಳೆದುಕೊಂಡವರು. ಅವರ ಬಳಿ ಯಾವ ಸಂಪತ್ತೂ ಇಲ್ಲ ತಾಲೂಕಿನ ಜನತೆ ಅವರ ಮೇಲೆ ಇಟ್ಟಿರುವ ಪ್ರೀತಿಗಿಂತ ಹೆಚ್ಚಾಗಿ. ರಾಜಕೀಯ ಕಾರಣಗಳಿಗಾಗಿ ಬಂಗೇರರು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಬೆಳ್ತಂಗಡಿ ತಾಲೂಕಿನ ಜನತೆ ಇಂದಿಗೂ ತಮ್ಮ ಮನಸ್ಸಿಲ್ಲಿರಿಸಿಕೊಂಡಿರುವ ಆಪತ್ಬಾಂಧವ ವಸಂತ ಬಂಗೇರರೇ ಆಗಿದ್ದಾರೆ. ಯಾಕೆಂದರೆ ಬಂಗೇರರ ಮನೆಬಾಗಿಲು ಸದಾ ನೊಂದವರಿಗಾಗಿ ತೆರದಿರುತ್ತದೆ ಬಂದವರನ್ನು ಅವರು ಬರಿ ಗೈಯಲ್ಲಿ ಕಳುಹಿಸಲಾರು ಎಂಬುದು ತಾಲೂಕಿನ ಜನರ ವಿಶ್ವಾಸವಾಗಿತ್ತು.