ಬೆಂಗಳೂರು: ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಅವರು, ತುಳು ಭಾಷೆಯನ್ನು ಕರ್ನಾಟಕ ರಾಜ್ಯದ 2 ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ವಿಧಾನಪರಿಷತ್ ನಲ್ಲಿ ಸರಕಾರದ ಗಮನ ಸೆಳೆದಿದ್ದಾರೆ. ಇದೇ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯಿತು. ತುಳು ಭಾಷೆಯ ಪರವಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಭಾರತಿ ಶೆಟ್ಟಿ ಹಾಗೂ ಇತರರು ಮಾತನಾಡಿದರು, ತುಳು ಭಾಷೆಗೆ ರಾಜ್ಯದಲ್ಲಿ ದ್ವಿತೀಯ ಭಾಷೆಯ ಸ್ಥಾನಮಾನ ನೀಡಬೇಕು ಹಾಗು ಎಂಟನೇ ಪರಿಛೇದದಲ್ಲಿ ತುಳು ಭಾಷೆಗೆ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಉತ್ತರ ನೀಡಿದ
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಸಕಾರಾತ್ಮಕವಾಗಿ ಸ್ಪಂದಿಸಿದರು. ತುಳು ಭಾಷೆಗೆ ಸ್ಥಾನಮಾನ ಕೊಡುವುದಕ್ಕೆ ಸರಕಾರ ಸಿದ್ದವಾಗಿದೆ ಎಂದ ಅವರು ಇದಕ್ಕೆ ಕಾನೂನು ಬದ್ದವಾಗಿ ಕೆಲವು ಕಾರ್ಯಗಳು ನಡೆಯಬೇಕಾಗಿದೆ.
ಈಬಗ್ಗೆ ಒಂದಕ್ಕಿಂತ ಹೆಚ್ಚು ಅಧೀಕೃತ ಭಾಷೆಗಳಿರುವ ರಾಜ್ಯಗಳಾದ ಆಂದ್ರಪ್ರದೇಶ, ಬಿಹಾರ ರಾಜ್ಯಗಳಿಗೆ ಅಧಿಕಾರಿಗಳ ತಂಡವನ್ನು ಕಳಿಹಿಸಿ ಅವರಿಂದ ಕೂಡಲೇ ಮಾಹಿತಿಯನ್ನು ತರಿಸಿಕೊಂಡು ಕಾನೂನು ಬದ್ದವಾಗಿ ಎಲ್ಲ ಕ್ರಮಗಳನ್ನು ಕೈಗೊಂಡು ಕೆಲವೇ ದಿನಗಳಲ್ಲಿ ತುಳು ಭಾಷೆಯನ್ನು ಕರ್ನಾಟಕದ 2 ನೇ ಅಧೀಕೃತ ಭಾಷೆಯನ್ನಾಗಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ 2005ರಲ್ಲಿಯೇ ಪ್ರಸ್ತಾವನೆ ಸಲ್ಲಿಸಲಾಗಿದೆ, ಈ ಕುರಿತಂತೆ ಸಹ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಸದನದಲ್ಲಿ ತಿಳಿಸಿದ್ದಾರೆ.