Maha Mastakabhishek of Lord Baahubali
ಬೆಳ್ತಂಗಡಿ: ವೇಣೂರಿನ ತಿಮ್ಮಣ್ಣ ಅಜಿಲರು 1604ರಲ್ಲಿ ಪ್ರತಿಷ್ಠಾಪಿಸಿದ ಬಾಹುಬಲಿ ಮೂರ್ತಿ ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕವು ಸಕಲ ಸಿದ್ಧತೆಗಳೊಂದಿಗೆ ವಿದ್ಯುಕ್ತವಾಗಿ ಗುರುವಾರ ಆರಂಭಗೊಂಡಿತು.
ಪಶ್ಚಿಮದಲ್ಲಿ ಸೂರ್ಯನು ಅಸ್ತಮಿಸುತ್ತಿದ್ದಂತೆ ಫಲ್ಗುಣಿ ತೀರದಲ್ಲಿನ ತ್ಯಾಗಮೂರ್ತಿಗೆ 108 ಕಲಶಗಳ ಅಭಿಷೇಕ ಸಂಜೆ 7 ಗಂಟೆಗೆ ಆರಂಭಗೊಂಡಿತು. ಜಿನ ಭಕ್ತರ ಹಲವಾರು ವರ್ಷಗಳ ಆಸೆ, ಆಕಾಂಕ್ಷೆ, ನಿರೀಕ್ಷೆಗಳಿಗೆ ಫಲ ದೊರಕಿದ್ದು ಬೋಲೋ ಭಗವಾನ ಬಾಹುಬಲಿ ಕೀ ಎಂಬ ಜಯಘೋಷ ವೇಣೂರಿನ ದಶ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ಸರ್ವೇಶ್ ಜೈನ್ ಮತ್ತು ತಂಡದವರ ಸುಮಧುರ ಸಂಗೀತ ಅಭಿಷೇಕದ ಸಿಂಚನಕ್ಕೆ ಸಾಥ್ ನೀಡಿತು.
ಮೊದಲಿಗೆ 108 ಕಲಶಗಳಿಂದ ಪವಿತ್ರ ನದಿಗಳಿಂದ ತಂದ ಜಲವನ್ನು ಅಭಿಷೇಕವನ್ನು ಸೇವಾಕರ್ತಗಳಾದ ಅಳದಂಗಡಿ ಅರಮನೆ ಡಾl ಪದ್ಮಪ್ರಸಾದ ಅಜಿಲ ಮತ್ತು ಕುಟುಂಬದವರು ಮಾಡುವ ಮೂಲಕ ಮಹಾ ಮಜ್ಜನಕ್ಕೆ ಚಾಲನೆ ನೀಡಿದರು.
ಪಂಚಾಮೃತ ಅಭಿಷೇಕ:
ಶುದ್ಧ ನಾರೀಕೇಳದ ನೀರಿನ ಅಭಿಷೇಕವಾದಾಗ ಕಲ್ಪವೃಕ್ಷದ ಸುವಾಸನೆ ಪರಿಸರದಲ್ಲಿ ಹರಡಿತು., ಕಬ್ಬಿನ ರಸದ ಧಾರೆ, ಹಾಲಿನ ನೊರೆ ಭುಜಬಲಿಯ ಅಂಗಾಂಗಳನ್ನು ಮೀಯಿಸಿದಾಗ ಶ್ರಾವಕರು ಪುಳಕಿತರಾದರು.
ಬಳಿಕ ಕಲ್ಕ ಚೂರ್ಣ, ಅರಸಿನ ಪುಡಿ, ಕೇಸರಿ ಮಿಶ್ರಿತ ಜಲ, ಚಂದನ ಪುಡಿ, ಶ್ರೀಗಂಧ,ಅಷ್ಟ ಗಂಧದ ಅಭಿಷೇಕ ನಡೆದಾಗ ಅದರಿಂದ ಹೊಮ್ಮಿದ ಸುಮಧುರ ಪರಿಮಳ ಪರಿಸರವನ್ನು ಸುವಾಸನಯುಕ್ತವನ್ನಾಗಿ ಮಾಡಿತು. ಭಕ್ತ ಜನರು ಆನಂದೋತ್ಸಾಹದಿಂದ ಜಯಘೋಷ ಮಾಡಿದರು.
ಪ್ರತಿ ಅಭಿಷೇಕದ ಮೊದಲು ಮೂರ್ತಿಯ ಪಾದದ ಬಳಿ ಅರ್ಘ್ಯ, ಮಂತ್ರ, ಆರತಿ, , ವಾಲಗ, ಜಲ ಸೇಚನ, ಸಂಗೀತ ಹಾಗೂ ವಿಕ್ಷಕ ವಿವರಣೆ ಇತ್ತು.
ಅಭಿಷೇಕದ ನಂತರ ಮೂರ್ತಿಯ ಜಿಡ್ಡು ತೆಗೆಯಲು ಅಶ್ವತ್ಥ,ಮಾವು,ಪಲಾ
ಶ,ಗೋಳಿ, ಬಸಿರಿ,ಅತ್ತಿ,ಆಲ ಮೊದಲಾದ ಮರದ ಕೆತ್ತೆಗಳನ್ನು ಪುಡಿ ಮಾಡಿ ಕುದಿಸಿ ತಯಾರಿಸಿದ ಬೆಚ್ಚಗಿನ ಕಷಾಯದಲ್ಲಿ ನೀರಿನ ಜಳಕ ನಡೆಯಿತು.
ಪುಷ್ಪ ವೃಷ್ಟಿ,ಕನಕ ವೃಷ್ಟಿ ನಡೆದ ಬಳಿಕ ಬೃಹತ್ ಮಾಲೆಯನ್ನು ಮಹಾ ಮೂರ್ತಿಗೆ ತೊಡಿಸಲಾಯಿತು. ಕೊನೆಯಲ್ಲಿ ಮಹಾಮಂಗಳಾರತಿಯೊಂದಿಗೆ ಮೊದಲದಿನದ ಮಹಾಭಿಷೇಕ ಸಂಪನ್ನಗೊಂಡಿತು.
ಮೂಡಬಿದರೆ ಡಾl ಚಾರುಕೀರ್ತಿ ಭಟ್ಟಾರಕ ಶ್ರೀಗಳು ಮಾರ್ಗದರ್ಶನ ನೀಡಿದರು.
ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಡಾl ಮೋಹನ ಆಳ್ವಾ ಉಪಸ್ಥಿತರಿದ್ದರು. ಸಾವಿರಾರು ಮಂದಿ ಅಭಿಷೇಕವನ್ನು ಕಣ್ತುಂಬಿಸಿಕೊಂಡರು.