Home ರಾಜಕೀಯ ಸಮಾಚಾರ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆ; ವಿಧಾನ ಸಭಾ ಅಧಿವೇಶನದಲ್ಲಿ ರಾಜ್ಯಪಾಲರು

ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆ; ವಿಧಾನ ಸಭಾ ಅಧಿವೇಶನದಲ್ಲಿ ರಾಜ್ಯಪಾಲರು

0
79

ಬೆಂಗಳೂರು;- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಹೊರಬಂದು ಮಧ್ಯವರ್ಗದ ಸ್ಥಿತಿಗೆ ಏರುತ್ತಿರುವುದು ಜಾಗತಿಕ ದಾಖಲೆಯಾಗಿದೆ ಎಂದು ರಾಜ್ಯಪಾಲ ಥಾವರ್‍ಚಂದ್ ಗೆಲ್ಹೋಟ್ ಹೇಳಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಪಂಚಖಾತ್ರಿ ಯೋಜನೆಗಳನ್ನು ಕೊಂಡಾಡಿದರು.
ಸರ್ಕಾರದ ಒಂದು ನಿರ್ಣಯದಿಂದ ಐದು ಕೋಟಿಗೂ ಹೆಚ್ಚು ಜನ ಮಧ್ಯಮ ವರ್ಗದ ಸ್ಥಿತಿಗೆ ಏರಲು ಸಾಧ್ಯವಾಗಿದೆ. ಜನರ ಜೀವನದ ಮೇಲೆ ಪರೋಕ್ಷ ಗಮನಾರ್ಹ ಬದಲಾವಣೆ ತಂದಿದೆ ಎಂದಿದ್ದಾರೆ.

ರಾಜ್ಯದಲ್ಲಿ ಬರಗಾಲವಿದ್ದರೂ ಕಳೆದ ವರ್ಷಕ್ಕಿಂತಲೂ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಯಾವುದೇ ಕಾರಣಕ್ಕೂ, ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದು ಸೂಕ್ತವಲ್ಲ ಎಂಬ ನಂಬಿಕೆಯೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಅಶಕ್ತರಾದವರಿಗೆ ಹೆಚ್ಚು ಅಗತ್ಯವಿತ್ತು. ಅದಕ್ಕಾಗಿ ಅರ್ಜಿಗಳ ಮಹಾಪೂರವೇ ಹರಿದುಬಂದಿತ್ತು. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳ ಅನುಷ್ಠಾನಕ್ಕೆ ಸುಸಜ್ಜಿತ ವ್ಯವಸ್ಥೆ ರೂಪಿಸಲಾಗಿದೆ.

ಆರ್ಥಿಕ ಅಸಮಾನತೆಯಿಂದ ಅಶಕ್ತರಾಗಿರುವ ಜನರಿಗೆ ಗ್ಯಾರಂಟಿ ಯೋಜನೆಗಳು ಸಾಲುವುದಿಲ್ಲ ಎಂಬ ಅರಿವು ಸರ್ಕಾರಕ್ಕಿದೆ. ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರಿಕೃತವಾಗಿದ್ದರೆ ಅದನ್ನು ಅಭಿವೃದ್ಧಿ ಎಂದು ಕರೆಯಲು ಸಾಧ್ಯವಿಲ್ಲ. ಎಲ್ಲ ಜನರನ್ನು ಅಭಿವೃದ್ದಿಯ ಭಾಗಿದಾರರನಾಗಿ ಮಾಡುವ ಅವಶ್ಯಕತೆ ಇದೆ ಮತ್ತು ಅಭಿವೃದ್ಧಿಯ ಫಲ ಎಲ್ಲರಿಗೂ ಲಭಿಸುವ ರೀತಿಯಲ್ಲಿ ಮಾಡಲು ನಮ್ಮ ಸರ್ಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳು ಈ ನಿಟ್ಟಿನಲ್ಲಿ ಒಂದು ಆರಂಭವಷ್ಟೇ ಎಂದು ಹೇಳಿದ್ದಾರೆ.

ನಮ್ಮ ಸರ್ಕರ ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಭವಿಷ್ಯದಲ್ಲಿ ಸಮಸ್ತ ಜನರ ಪಾಲಿಗೆ ಸಂತೃಪ್ತಿ ಮತ್ತು ನೆಮ್ಮದಿಯ ದಿನಗಳನ್ನು ತರುವ ಉದ್ದೇಶದಿಂದ ಹೊಸ ನೀತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ರಂಗಗಳಲ್ಲಿ ಹೊಸ ಭರವಸೆಗಳನ್ನು ಹುಟ್ಟು ಹಾಕಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಹಾಗೂ ಜೀವನ ಭದ್ರತೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಶಕ್ತಿ ಯೋಜನೆಯಿಂದ ರಾಜ್ಯದಲ್ಲಿನ 3.5 ಕೋಟಿ ಮಹಿಳೆಯರು ಜಾತಿ, ಧರ್ಮಗಳ ಬೇಧವಿಲ್ಲದೆ ಉಚಿತ ಪ್ರಯಾಣದ ಲಾಭ ಪಡೆಯುತ್ತಿದ್ದಾರೆ. 150 ಕೋಟಿಗೂ ಹೆಚ್ಚು ಟ್ರಿಪ್‍ಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ವಿವರಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಆಹಾರ ಭದ್ರತಾ ಕಾಯ್ದೆ ಅನ್ವಯ ವಿತರಿಸಲಾಗುವ 5 ಕೆಜಿ ಆಹಾರಧಾನ್ಯಗಳೊಂದಿಗೆ ಹೆಚ್ಚುವರಿ 5 ಕೆಜಿ ಆಹಾರಧಾನ್ಯ ಸೇರಿಸಿ ಪ್ರತಿ ಫಲಾನುಭವಿಗೆ 10 ಕೆಜಿ ಆಹಾರ ಧಾನ್ಯ ವಿತರಿಸಲು ಸರ್ಕಾರ ಬದ್ದವಾಗಿದೆ. ಆಹಾರಧಾನ್ಯಗಳು ದೊರೆಯುವರೆಗೂ 5 ಕೆಜಿ ಪ್ರಮಾಣಕ್ಕೆ ಅನುಗುಣವಾಗಿ ಪಲಾನುಭವಿಗಳಿಗೆ ನಗದು ಪಾವತಿಸಲಾಗುತ್ತಿದೆ. 2023 ಜುಲೈನಿಂದ 2024 ಜನವರಿ ಅಂತ್ಯದವರೆಗೆ 4595 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ಪಾವತಿಸಲಾಗಿದೆ.

ಗೃಹಜ್ಯೋತಿ ಯೊಜನೆಯಡಿ 1.6 ಕೋಟಿ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.75 ಕೋಟಿ ಫಲಾನುಭವಿಗಳಿಗೆ ಜನವರಿಗೂ 11,037 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಈ ಯೋಜನೆಗೆ 17,500 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಭತ್ಯೆ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಕೈ ಸೇರಿದ ಹಣ ಆರ್ಥಿಕತೆ ಉತ್ತೇಜನಕ್ಕೆ ಕಾರಣವಾಗಿದೆ ಎಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here