ಬೆಳ್ತಂಗಡಿ : ‘ ಕ್ರೈಸ್ತ ಸಮುದಾಯ ಕಷ್ಟದಲ್ಲಿರುವವರಿಗೆ ಸದಾ ಸಹಾಯಹಸ್ತ ನೀಡುವ ಸಮುದಾಯ, ಎಲ್ಲಾ ಧರ್ಮದವರೂ ಉತ್ತಮರೇ ಆಗಿದ್ದು ಬೆರಳೆಣಿಕೆಯ ಮಂದಿ ಮಾಡುವ ಕೆಟ್ಟ ಕಾರ್ಯಗಳಿಗೆ ಧರ್ಮದ ಲೇಪ ಹಚ್ಚಬಾರದು. ಸಮಾಜ ವಿರೋಧಿ ಕೃತ್ಯವೆಸಗುವವರ ಮೇಲೆ ಕ್ರಮ ಕೈಗೊಳ್ಳಬೇಕೇ ಹೊರತು ಜನಾಂಗವನ್ನು ದ್ವೇಷಿಸಬಾರದು’ ಎಂದು ರಾಜ್ಯ ಸರ್ಕಾರದ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಅವರು ಭಾನುವಾರ ಕರ್ನಾಟಕದ ಪ್ರಥಮ ಸೀರೋ ಮಲಬಾರ್ ಧರ್ಮಪ್ರಾಂತ್ಯವಾದ ಬೆಳ್ತಂಗಡಿ ಧರ್ಮಪ್ರಾಂತ್ಯ ಹಾಗೂ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ಬಿಷಪ್ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷ ದೀಕ್ಷೆಯ ರಜತ ಮಹೋತ್ಸವದಲ್ಲಿ ವಿದ್ಯಾನಿಧಿ ಯೋಜನೆ ಬಿಡುಗಡೆಗೊಳಿಸಿ ಮಾತನಾಡಿದರು.
‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಬ್ಯಾಂಕಿಂಗ್ ಹಾಗೂ ಶಿಕ್ಷಣಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಿಂದ 1 ಕೋಟಿ 65 ಲಕ್ಷ ಕುಟುಂಬಗಳಿಗೆ ನೆರವಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿ ಮತ ನೋಡದೆ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಯಾವುದೇ ಯೋಜನೆಗಳು ಜನಪರವಾಗಿದ್ದು, ಯಾವುದೋ ಒಂದು ಕಾಲಕ್ಕೆ ನಿಂತು ಹೋಗದೆ ನಿರಂತರವಾಗಿ ಮುಂದುವರಿಯಲಿದೆ’ ಗ್ಯಾರಂಟಿ ಯೋಜನೆಗಾಳು ನಿರತ ವಾಗಿ ಮುಂದುವರಿಯಲಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ 25 ಬಡ ಕುಟುಂಬಗಳಿಗೆ ಮನೆ ಹಸ್ತಾಂತರಿಸಿ ಮಾತನಾಡಿ, ‘ ಭಾರತೀಯತೆಯನ್ನು ಒಪ್ಪಿಕೊಂಡ ಕ್ರೈಸ್ತ ಸಮಾಜದ ಜನರು ಕಷ್ಟದಿಂದ ಜೀವನ ಕಂಡುಕೊಂಡವರು. ಭಾರತೀಯತೆಯನ್ನು ಒಪ್ಪಿಕೊಂಡದಕ್ಕೆ ಒಂದು ಉದಾಹರಣೆಯೆಂದರೆ ಭಾರತೀಯ ಮೂಲದ ಅವರ ಹೆಸರುಗಳು ಮತ್ತು ಚರ್ಚುಗಳ ಮುಂದೆ ಇರುವ ಅವರ ಧ್ವಜಸ್ತಂಭ. ಇದು ಭಾರತದ ಪ್ರತಿಯೊಂದು ದೇವಾಲಯದಲ್ಲೂ ಕಂಡುಬರುತ್ತದೆ. ಸೌಹಾರ್ದತೆಯ ಬಾಳು ನಡೆಸುವ ಇವರು ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಕ್ರೈಸ್ತ ಸಮುದಾಯ ವಿದ್ಯೆ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದು ಜಿಲ್ಲೆಯ ಅಭಿವೃದ್ಧಿಗೆ ಕಾರಣವಾಗಿದೆ. ಎಲ್ಲಾ ಸಮುದಾಯದೊಂದಿಗೆ ಪ್ರೀತಿ ಸ್ನೇಹದೊಂದಿಗೆ ಸಾಮರಸ್ಯದ ಬದುಕು ಬೆಳೆಸಿಕೊಂಡಿದೆ ಎಂದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ‘ ಕಳೆದ 25 ವರ್ಷಗಳಿಂದ ಬೆಳ್ತಂಗಡಿ ಧರ್ಮಪ್ರಾಂತ್ಯ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಸೇವೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯನ್ನು ಬಯಸಿದೆ. ಇದು ನಿಜವಾದ ದೇಶಪ್ರೇಮವೇ ಹೊರತು ನಡು ರಸ್ತೆಯಲ್ಲಿ ಗಟ್ಟಿಯಾಗಿ ಸಾರ್ವಜನಿಕ ಭಾಷಣ ಮಾಡುವುದು ದೇಶಪ್ರೇಮವಾಗಲಾರದು. 25 ವರ್ಷಗಳ ಹಿಂದೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಸಂದರ್ಭದಲ್ಲೂ ಧರ್ಮಪ್ರಾಂತ್ಯ ರಚನೆಯಾಗಿ ಜನರಿಗೆ ಸೇವೆ ಮಾಡಿ ಜನರ ಬದುಕು ಬೆಳಗಿರುವುದು ಮುಂದಿನ ದಿನಗಳಲ್ಲಿ ದಿಕ್ಸೂಚಿಯಾಗಿದೆ. ಬಿಷಪ್ ರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ’ ಎಂದರು.
ಸಿರೋ ಮಲಬಾರ್ ಕ್ಯಾಥೋಲಿಕ್ ಚರ್ಚ್ ಇದರ ಮೇಜರ್ ಆರ್ಚ್ ಬಿಷಪ್ ರಾಫಾಯಲ್ ತಟ್ಟಿಲ್ ಕಾರ್ಯಕ್ರಮ ಉದ್ಘಾಟಿಸಿ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರನ್ನು ಗೌರವಿಸಿ ಮಾತನಾಡಿ, ‘ ಸಮಾಜದಲ್ಲಿ ಹಿಂದುಳಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಸೇವೆ ನೀಡುವ ಮೂಲಕ ಅಂತವರನ್ನು ಮುಖ್ಯವಾಹಿನಿಗೆ ತರುವುದು ಧರ್ಮಪ್ರಾಂತ್ಯದ ಮುಖ್ಯ ಗುರಿಯಾಗಿದೆ ‘ಎಂದರು.
ಧರ್ಮಪ್ರಾಂತ್ಯದ ಧರ್ಮಗುರುಗಳಾಗಿ 25 ವರ್ಷ ಪೂರೈಸಿದ ಬಿಷಪ್ ಲಾರೆನ್ಸ್ ಮುಕ್ಕುಯಿ ಅಭಿನಂದನೆ ಸ್ವೀಕರಿಸಿ ಮಾತನಾಡಿ,’ ದೇವರ ಅಪಾರವಾದ ಆಶೀರ್ವಾದದ ಮೂಲಕ ಸಮಾಜದ ಅಭಿವೃದ್ಧಿಗೆ ಅಳಿಲು ಸೇವೆಯನ್ನು ಮಾಡುವ ಪ್ರಯತ್ನ ಮಾಡಲಾಗಿದೆ. ಎಲ್ಲಾ ವರ್ಗದ ಜನರ ಉದಾತ್ತವಾದ ಅಭಿಮಾನದ ಮೂಲಕ ಏಳು-ಬೀಳುಗಳಲ್ಲಿ ಆಧಾರಸ್ತಂಭವಾಗಿರುವುದು ಸ್ಮರಣೀಯ. ಬೆಳ್ತಂಗಡಿ ಬೆಳಕನ್ನು ಕೊಡುವ ಊರಾಗಿದ್ದು,ಪ್ರಭುತ್ವವುಳ್ಳ ಜನರು ಇಲ್ಲಿದ್ದಾರೆ. ಇಲ್ಲಿಯ ಜನತೆ ಸದಾ ಪ್ರೀತಿ ಮಮತೆ ನೀಡುವವರು’ ಎಂದರು.
ತಲಚೇರಿಯ ಆರ್ಚ್ ಬಿಷಪ್ ಜೋಸೆಪ್ ಪಾಂಪ್ಲಾನಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕರಾದ ಹರೀಶ್ ಪೂಂಜ, ಅಶೋಕ್ ಕುಮಾರ್ ರೈ, ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾಡೋ, ಮಂಗಳೂರಿನ ಬಿಷಪ್ ಪೀಟರ್ ಪೌಲ್ ಸಲ್ದಾನ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ಪುತ್ತೂರು ಬಿಷಪ್ ಗೀವರ್ಗೀಸ್ ಮಕೋರಿಸ್, ಕೊಟ್ಟಯಾಂನ ಆರ್ಚ್ ಬಿಷಪ್ ಮ್ಯಾಥ್ಯೂ ಮೂಲಕ್ಕಟ್, ಬ್ರಹ್ಮಾವರ ಬಿಷಪ್ ಯಾಕೋಬ್ ಮಾರ್ ಎಲಿಯಾಸ್, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಗಂಗಾಧರ ಗೌಡ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಕ್ರೈಸ್ತ ಅಭಿವೃದ್ದಿ ಮಂಡಳಿ ಅಧ್ಯಕ್ಷ ಜೆ.ಆರ್.ಲೋಬೋ , ಕ್ರೈಸ್ತ ಮುಖಂಡ ಐವನ್ ಡಿಸೋಜಾ ಮುಂತಾದವರು ಇದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಫಾ. ಲಾರೆನ್ಸ್ ಮುಕ್ಕುಯಿ ಅವರನ್ನು ಡಾ. ವೀರೇಂದ್ರ ಹೆಗ್ಗಡೆಯವರು ಗೌರವಿಸಿದರು.
ಪೂರ್ವಾಹ್ನ ಗಂಟೆ 8.45 ಕ್ಕೆ ಕೃತಜ್ಞತಾ ದೀವ್ಯಬಲಿಪೂಜಾರ್ಪಣೆ ನಡೆಯಿತು. ಕರ್ನಾಟಕ ಹಾಗೂ ಕೇರಳದಿಂದ ಶ್ರೇಷ್ಠ ಮಹಾ ಧರ್ಮಾಧ್ಯಕ್ಷರು, ಧರ್ಮಾಧ್ಯ ಕ್ಷರುಗಳು, ಧರ್ಮಗುರುಗಳು, ಧರ್ಮಭಗಿನಿಯರು, ಸಾವಿರಾರು ಜನರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಧರ್ಮಪ್ರಾಂತ್ಯದ ವಿಕಾರ್ ಜನರಲ್ ಜೋಸೆಫ್ ವಲಿಯಪರಂಬಿಲ್ ಸ್ವಾಗತಿಸಿದರು. ಲಿಲ್ಲಿ ಆಂಟನಿ ವಂದಿಸಿದರು.
ಡಾ.ಏಂಜಲ್ ಅಲೆಕ್ಸ್, ಪಿ.ಎ ತೋಮಸ್
ಫಾ. ಜೋಬಿ ಪಲ್ಲಟ್ ಕಾರ್ಯಕ್ರಮ ನಿರೂಪಿಸಿದರು.